
ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರ ಮನೆ ಬಾಗಿಲಲ್ಲಿ ಕಸ ಸುರಿಯುವ ಕಸದ ಹಬ್ಬ ಮಾಡಿದರೂ ತ್ಯಾಜ್ಯ ವ್ಯಾಜ್ಯಗಳು ನಿಂತಿಲ್ಲ. ‘ರಾಜ್ಯಭಾರ ಮಾಡುವುದಕ್ಕಿಂಥ ತ್ಯಾಜ್ಯಭಾರ ಬಲು ಕಷ್ಟ’ ಎಂಬುದು ಕಾರ್ಪೊರೇಷನ್ ಅಧಿಕಾರಿಯ ಅನುಭವ. ಅವರು, ಮತ್ತೊಂದು ತ್ಯಾಜ್ಯ ವ್ಯಾಜ್ಯ ಬಗೆಹರಿಸಲು ಬಂದಿದ್ದರು.
‘ಸಾರ್, ಎದುರು ಮನೆಯವಳು ತನ್ನ ಮನೆ ಕಸವನ್ನು ನಿತ್ಯ ಖಾಲಿ ಸೈಟಿಗೆ ಹಾಕಿದ್ದಾಳೆ. ಕೇಳಿದರೆ ನನ್ನ ಮೇಲೇ ಕಸ ಸುರಿದು ಜಗಳಕ್ಕೆ ಬಂದಳು’ ಎಂದು ನೈಟಿ ತುಂಬಾ ಕಸ ಅಂಟಿಕೊಂಡಿದ್ದ ಸುಮಿ ದೂರಿದಳು.
‘ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿಯಬಾರದು. ಮನೆಯ ಒಣ, ಹಸಿ ಕಸ ವಿಂಗಡಿಸಿ ಬಾಗಿಲಿಗೆ ಬರುವ ಕಾರ್ಪೊರೇಷನ್ ಗಾಡಿಗೆ ಕೊಡಬೇಕು’ ಎಂದರು ಅಧಿಕಾರಿ.
‘ಇವಳು ಮಗುವನ್ನು ರಸ್ತೆಬದಿ ಕೂರಿಸಿ ಗಲೀಜು ಮಾಡಿಸುತ್ತಾಳೆ. ಇವಳಿಗೂ ದಂಡ ವಿಧಿಸಿ’ ಸುಮಿ ವಿರುದ್ಧ ವನಜ ದೂರಿದಳು.
‘ಟಾಯ್ಲೆಟ್‌ನಲ್ಲಿ ಕೂರುವುದಿಲ್ಲ ಎಂದು ಪಾಪು ಹಟ ಮಾಡುತ್ತೆ, ಇನ್ನೇನು ಮಾಡಲಿ ಸಾರ್? ಯಾವ ಬೀದಿನಾಯಿಯೂ ಪಾಪು ಕಸವನ್ನು ಮೂಸಿಯೂ ನೋಡುವುದಿಲ್ಲ’ ಸುಮಿ ಇರೋ ವಿಚಾರ ಹೇಳಿದಳು.
‘ಸಾರ್, ಇವರು ದಿನಾ ನಾಯಿಯನ್ನು ವಾಕಿಂಗ್ ಕರೆತಂದು ರಸ್ತೆಯಲ್ಲಿ ಗಲೀಜು ಮಾಡಿಸುತ್ತಾರೆ. ಕೇಳಿದರೆ ನಮ್ಮ ಮೇಲೇ ನಾಯಿ ಛೂ ಬಿಡ್ತಾರೆ’ ಗೋಪಾಲಿ ಹೇಳಿದ.
‘ಮತ್ತೇನ್ರೀ ಮಾಡ್ಬೇಕು? ನಾಯಿಗಳಿಗೆ ಸರ್ಕಾರ ಸಾರ್ವಜನಿಕ ಶೌಚಾಲಯ ಕಟ್ಟಿಸಿಲ್ಲವಲ್ಲ’ ಸೀನಪ್ಪ ರೇಗಿದ.
‘ಅದೆಲ್ಲಾ ಗೊತ್ತಿಲ್ಲ ಕಣ್ರೀ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ, ಗಲೀಜು ಮಾಡಿದರೆ ಕ್ರಮ ತೆಗೆದುಕೊಳ್ತೀವಿ’ ಅಧಿಕಾರಿ ಖಡಕ್ಕಾಗಿ ಹೇಳಿದರು.
‘ಸಾರ್, ನಾಯಿ ಕಸ, ಪಾಪು ಕಸದ ಪ್ರಕರಣವನ್ನು ಏನು ಮಾಡ್ತೀರಾ?’
‘ಮೇಲಾಧಿಕಾರಿಗಳಿಗೆ ವರದಿ ಕೊಡ್ತೀವಿ’ ಎಂದು ಸಿಟ್ಟಿನಿಂದ ಅಧಿಕಾರಿ ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.