‘ಆಯುಧಪೂಜೆ ಹತ್ರ ಬರ‍್ತಾ ಐತೆ... ನಿಮ್ ಮನೆಗಳಲ್ಲಿ ಎಂಗೈತೆ ತಯಾರಿ?’ ಕೇಳಿದ ಗುದ್ಲಿಂಗ.
‘ನಮ್ಮನೇಲಿ ತಾತನ ಕಾಲದಿಂದ್ಲೂ ಕುಡ್ಲು, ಹಾರೆ, ಕತ್ರಿ, ಚಾಕು ಇದ್ನೆಲ್ಲಾ ಇಟ್ಟೇ ಆಯುಧಪೂಜೆ ಮಾಡಾದು?’ ಎಂದ ಮಾಲಿಂಗ
‘ಅಯ್ಯೋ! ಚಾಕು, ಕತ್ರಿ ಇಡೋ ಕಾಲ ಹೋಯ್ತು... ಈಗೇನಿದ್ರೂ ಮಚ್ಚು, ಲಾಂಗು ಇಟ್ಟು ಪೂಜೆ ಮಾಡೋ ಕಾಲ ಕಣ್ಲಾ’.
‘ಏ ನಿಮ್ಮನೇಲಿ ನಿನ್ ಎಂಡ್ರು ಲಟ್ಟಣಿಗೆ, ಸೌಟು, ಡಬರೀನೆ ಪೂಜೆ ಮಾಡೋದು ಅಲ್ವಾ?’ ಕಿಚಾಯಿಸಿದ ಪರ‍್ಮೇಶಿ.
‘ಅವೆಲ್ಲಾ ಪಾಣಿಗ್ರಹಣ ಮಾಡಿಕೊಂಡ ಗೃಹಸ್ಥರ ಕ್ಷಿಪಣಿಗಳು. ನಿಮ್ ಮನೇಲಿ ಧೂಮಕೇತು ಅಂದ್ರೆ ಪೊರಕೆ, ಫ್ಲೈಯಿಂಗ್ ಸಾಸರ್ ಅಂದ್ರೆ ಊಟದ ತಟ್ಟೇನೂ ಇಟ್ಟು ನಿನ್ ಎಂಡ್ರು ಪೂಜೆ ಮಾಡಲ್ವಾ?’ ಟಾಂಗ್ ಕೊಟ್ಟ ಕಲ್ಲೇಶಿ.
‘ಪಾಂಡವರು ಅಜ್ಞಾತವಾಸಕ್ಕೆ ಮುಂಚೆ ಶಮೀ ವೃಕ್ಷದಲ್ಲಿ ಆಯುಧಗಳನ್ನ ಅಡಗಿಸಿಟ್ಟಿದ್ರಲ್ಲ ಹಾಗೆ ಕೆಲವರು ಮನೇಲಿ ಬಂದೂಕು, ಬಾಂಬು ಇಟ್ಟಿರ್ತಾರೆ’.
‘ಅದೂ ನಿಜನೇ. ಅದಕ್ಕೆ ಪೊಲೀಸರೇ ಪೂಜೆ ಮಾಡ್ತಾರೆ. ಹಿಂದೆ ವೆಪನ್ನು ಪೆನ್ನೂ ಆಗ್ಬಹುದಿತ್ತು, ಗನ್ನೂ ಆಗ್ಬಹುದಿತ್ತು. ಈಗ ‘ಪನ್’ಆಗಿ ನಗೆಪಾಟಲಾಗೋಗಿದೆ...’
‘ಅಂಗಂದ್ರೆ ಏನ್ಲಾ?’
‘ಮುಂಚೆ ಕೆಲಸಕ್ಕೆ ಬಳಸೋ ವಸ್ತುಗಳನ್ನ ಆಯುಧ ಅಂತಿದ್ರು. ಈಗ ಕೆಲಸಕ್ಕೆ ಬಾರದ ವಸ್ತುಗಳೂ ಆಯುಧ ಆಗವಲ್ಲ’.
‘ಕೆಲಸಕ್ಕೆ ಬಾರದವು ಅಂದ್ರೆ ಏನ್ಲಾ?’
‘ಬುರುಡೆ ಕಣ್ಲಾ ಬುರುಡೆ. ದಧೀಚಿ ಬೆನ್ಮೂಳೆ ತರ ಕೆಲವರು ಇದ್ದ ಬದ್ದ ಮೂಳೆನೆಲ್ಲಾ ಬಿಲ್ ಮಾಡಿ ಸಿಕ್ಕ ಸಿಕ್ಕ ಕಡೆ ಬಾಣ ಬಿಡ್ತಾವ್ರೆ’.
‘ಮನುಷ್ಯ ಸತ್ ಮೇಲಾದ್ರೂ ಉಪಯೋಗಕ್ಕೆ ಬತ್ತಾವ್ನಲ್ಲ ಅಂತ ಖುಷಿಪಡು’.
‘ಸತ್ ಮೇಲ್ ಯಾಕ್ಲಾ? ಬದುಕಿದ್ದಾಗ್ಲೂ ಉದ್ದ ತುಂಡವಾಗಿ, ಚೂಪು ಮೊಂಡವಾಗಿ ಜನರನ್ನ ಹಿಂಸೆ ಮಾಡೋ ಆಯುಧ ನಮ್ ರಾಜಕೀಯದೋರ ತವ ಐತಲ್ಲ...’
‘ಏನಪ್ಪಾ ಅಂತಾದ್ದು? ನಮ್ಗೆ ಗೊತ್ತಿಲ್ದೆ ಇರೋದು?’
‘ನಾಲಗೆ ಕಣ್ಲಾ ನಾಲಿಗೆ’ ಎಂದ ಪರ‍್ಮೇಶಿ. ಎಲ್ಲಾ ಹೌದೆಂದು ತಲೆಯಾಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.