ADVERTISEMENT

ಚುರುಮುರಿ| ಕೊರೊನಾ ಮಹಿಮೆ!

ಬಿ.ಎನ್.ಮಲ್ಲೇಶ್
Published 21 ಮೇ 2020, 22:06 IST
Last Updated 21 ಮೇ 2020, 22:06 IST
ಚುರುಮುರಿ
ಚುರುಮುರಿ   

ಹರಟೆಕಟ್ಟೆ ಬಹುದಿನಗಳ ನಂತರ ಸಭೆ ಸೇರಿತ್ತು. ಎಲ್ಲರ ತಲೆ ಮೇಲೂ ಭರ್ಜರಿ ಫಸಲು! ಮಾಸ್ಕ್ ಬೇರೆ ಹಾಕಿದ್ದರಿಂದ ತೆಪರೇಸಿಗೆ ಗೊಂದಲವಾಯಿತು. ‘ಲೇ, ಸ್ವಲ್ಪ ಮಾಸ್ಕ್ ತೆಗೀರಲೆ, ಯಾರ‍್ಯಾರು ಅಂತ ಮಕನಾದ್ರು ನೋಡ್ಕಳಣ, ಯಾಕೆ ಯಾರೂ ಕಟಿಂಗ್ ಮಾಡಿಸಿಲ್ವ?’ ಎಂದ.

‘ಕಟಿಂಗಾ? ಈ ಜೀವನಾನೇ ಸಾಕಾಗೇತಿ ಕಣಲೆ, ದರಿದ್ರ ಕೊರೊನಾ ಯಾವಾಗ ಕಂಟ್ರೋಲ್‍ಗೆ ಬರ್ತತೋ ಏನೋ...’ ದುಬ್ಬೀರ ಗೊಣಗುತ್ತ ಮಾಸ್ಕ್ ತೆಗೆದ.

‘ನಿನ್ತೆಲಿ, ಕೊರೊನಾ ಅನ್ನೋದು ನಮ್ ಹೆಂಡ್ತಿಯರ ತರ ಕಣಲೆ, ಕಂಟ್ರೋಲ್‍ಗೆ ಬರೋ ಪೈಕಿ ಅಲ್ಲ. ನಾವೇ ಹೊಂದ್ಕಂಡ್ ಹೋಗ್ಬೇಕು ಅಷ್ಟೆ’ ಗುಡ್ಡೆ ನಕ್ಕ.

ADVERTISEMENT

‘ಹಂಗಂತೀಯ? ಮೊನ್ನೆ ನಾನೂ ದುಬ್ಬೀರ ಒಬ್ಬ ಗುರೂಜಿ ಹತ್ರ ಕೊರೊನಾ ಭವಿಷ್ಯ ಕೇಳೋಕೆ ಹೋಗಿದ್ವಿ. ದುಬ್ಬೀರನ ಕೈ ನೋಡಿದ ಗುರೂಜಿ, ಏನ್ರಿ ನಿಮ್ ಹಸ್ತದಲ್ಲಿ ಗೆರೆಗಳೇ ಇಲ್ಲವಲ್ಲ ಅಂದ್ರು. ಅದ್ಕೆ ದುಬ್ಬೀರ ಸ್ಯಾನಿಟೈಸರ್ ಉಜ್ಜಿ ಉಜ್ಜಿ ಸವೆದೋಗಿದಾವೆ ಗುರೂಜಿ ಅಂದ. ಆದ್ರೆ ನಿಜ ಏನ್ ಗೊತ್ತಾ? ದುಬ್ಬೀರನ ಗೆರೆಗಳು ಸವೆದದ್ದು ಸ್ಯಾನಿಟೈಸರ್ ಉಜ್ಜಿ ಅಲ್ಲ, ಮನೇಲಿ ಮುಸುರೆ ಪಾತ್ರೆ ಉಜ್ಜಿ!’ ತೆಪರೇಸಿ ಕೀಟಲೆಗೆ ದುಬ್ಬೀರನಿಗೂ ನಗು ತಡೆಯಲಾಗಲಿಲ್ಲ.

‘ಅದಿರ‍್ಲಿ, ನಿಮ್‍ಗೊಂದ್ ವಿಷಯ ಗೊತ್ತಾ? ನಮ್ ರಾಜಾಹುಲಿ ಸಾಹೇಬ್ರು ದಿನಾ ಕೊರೋನಮ್ಮನ ಫೋಟೋಕ್ಕೆ ಪೂಜೆ ಮಾಡ್ತದಾರಂತೆ’ ಪರ್ಮೇಶಿ ವಿಷಯಾಂತರ ಮಾಡಿದ.

‘ಹೌದಾ? ನಮ್ಮ ಜನರನ್ನ ಕಾಪಾಡು ಅಂತ ಪೂಜೆ ಮಾಡ್ತಿರಬೇಕು ಪಾಪ...’

‘ಅಲ್ಲ, ತಾಯಿ ನೀನು ಬಂದೇ ಬಂದಿ, ಮಂತ್ರಿ ಮಾಡಿ ಅಂದೋರು, ಕತ್ತಿ-ಗುರಾಣಿ ಹಿಡಿದೋರು, ನಾನೇ ಮುಂದಿನ ಮುಖ್ಯಮಂತ್ರಿ ಅಂದೋರು ಹೇಳದೆ ಕೇಳದೆ ನಾಪತ್ತೆ ಆಗೋದ್ರು. ಏನಮ್ಮಾ ನಿನ್ನ ಮಹಿಮೆ ಅಂತ ದಿನಾ ಕೈ ಮುಗೀತಿದಾರಂತೆ!’

ಪರ್ಮೇಶಿ ಮಾತಿಗೆ ಹರಟೆಕಟ್ಟೆಯಲ್ಲಿ ನಗೆಯ ಅಲೆ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.