ADVERTISEMENT

ಚುರುಮುರಿ: ವ್ಯಾಕ್ಸಿನ್ ಡೋಸ್‌

ಎಸ್.ಬಿ.ರಂಗನಾಥ್
Published 10 ಮಾರ್ಚ್ 2021, 19:31 IST
Last Updated 10 ಮಾರ್ಚ್ 2021, 19:31 IST
   

‘ಬೆಂಗ್ಳೂರಲ್ಲಿ ಮತ್ತೆ ಕೆಲವೆಡೆ ಸೀಲ್‌ಡೌನ್!’ ಎಂದ ಸ್ನೇಹಿತ ಸೀನಪ್ಪ.

‘ಎಲ್ಲಾ ನಿನ್ನಂಥ ಬೇಜವಾಬ್ದಾರಿ ಜನ್ರಿಂದ. ಸೀನಿಯರ್ ಸಿಟಿಜನ್ಸ್‌ಗೆ ಕೊರೊನಾ ಲಸಿಕೆ ಶುರು ಮಾಡಿ ಒಂದು ವಾರವಾದ್ರೂ ನೀನು ತಗೊಂಡಿದೀಯಾ? ಎಷ್ಟು ಕರೆದ್ರೂ ಬರ್ಲಿಲ್ಲ’.

‘ಅದಕ್ಕೆ ಕಾರಣ ಎರಡು’.

ADVERTISEMENT

‘ಯಾವಪ್ಪಾ ಆ ಘನಂದಾರಿ ಕಾರಣಗಳು?’

‘ಒಂದು, ನಂಗೆ ಯಯಾತಿಯಂತೆ ದೀರ್ಘಾಯುಷಿಯಾಗೋ ಬಯಕೆಯಿಲ್ಲ. ಎಷ್ಟೋ ಜನ ಹಿರಿಯ ರಾಜಕಾರಣಿಗಳು ನಮ್ಗೆ ಲಸಿಕೆ ಬೇಡಾಂದಿಲ್ವೇ? ನಮ್ಮ ಖರ್ಗೆ ಸಾಹೇಬ್ರೇ ಹಾಗೆ ಹೇಳಿದಾರೆ!

‘ಹಾಗೇನಿಲ್ಲ, ಅದ್ರ ಪ್ರಾಮುಖ್ಯತೆ ಅರಿತ ಕರುನಾಡ ಕೃಷಿ ಸಚಿವರು, ಕಾನೂನು ಗೊತ್ತಿರ್ಲಿಲ್ಲಾಂತ, ಡಾಕ್ಟರನ್ನ ಮನೆಗೇ ಕರೆಸ್ಕೊಂಡು ತಗೊಳ್ಲಿಲ್ವೇ? ಉದಾಸೀನ ಮಾಡಿದ್ದಕ್ಕೆ ಎಷ್ಟೋ ಸೆಲೆಬ್ರಿಟಿಗಳು ಬೆಲೆ ತೆರಬೇಕಾಯಿತಲ್ಲ... ನಿನ್ನ ಎರಡನೇ ಕಾರಣ ಏನಯ್ಯಾ?’

‘ಏನಿಲ್ಲ ಬಿಡಪ್ಪಾ’.

‘ಹೇಳೋ, ಪರ್ವಾಯಿಲ್ಲ’.

‘ಫಸ್ಟ್ ಡೋಸ್ ತಗೊಂಡ್ಮೇಲೆ ಸೆಕೆಂಡ್ ಡೋಸ್‌ವರೆಗೆ ಒಂದ್ ತಿಂಗ್ಳು ಎಣ್ಣೆ ಮುಟ್ಟೋಹಾಗಿಲ್ವಂತೆ?!’

‘ಏ ಗುಲ್ಡೂ, ಅದೆಲ್ಲಾ ಸುಳ್ಳು. ಯಾರೋ ಹಾಗೆ ಹೇಳಿದ್ದು?’

‘ಬ್ರಾಂಡಿಶಾಪ್ ಬಾಬಣ್ಣ’.

‘ರೋಗಿ ಬಯಸಿದ್ದೂ ಅದೇ ಡಾಕ್ಟರ್ ಹೇಳಿದ್ದೂ ಅದೇ ಅನ್ನೋ ಹಾಗಿದೆ ನಿಂಗೆ. ಹೋಗೋಣ ಬಾ, ಕೇಳ್ತೀನಿ ಅವ್ನಿಗೆ ಯಾವ ಸೈಂಟಿಸ್ಟ್ ಹಾಗೆ ಹೇಳಿದಾರೇಂತ. ಅವ್ನು ಯಾಕೆ ಹಾಗೆ ಹೇಳಿದಾನೆ ಅನ್ನೋ ಅರಿವಿಲ್ದ ಅವಿವೇಕಿ ನೀನು’.

‘ಬೇಡ ಬಿಡಪ್ಪ, ತಗೊಳ್ತೀನಿ... ಲಸಿಕೆ ಹಾಕೋಕೆ ಏನೋ ಡಾಕ್ಯುಮೆಂಟ್ಸ್ ಕೇಳ್ತಾರಂತಲ್ಲ?’

‘ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್- ಯಾವ್ದಾದ್ರೂ ಒಂದು ಸಾಕು, ಹೋಗಿ ತಗೊಂಬಾ’.

‘ಆಗ್ಲಯ್ಯಾ, ತರ್ತೀನಿ ಇಲ್ಲೇ ಇರು’.

ಭಾಳಾ ಹೊತ್ತಿಂದ ನಾನು ಇಲ್ಲೇ ಕಾಯ್ತಿದ್ದೀನಿ. ಸೀನಪ್ಪನಿಗೆ ಅವುಗಳಲ್ಲಿ ಒಂದೂ ಇನ್ನೂ ಸಿಕ್ಕಂತೆ ಕಾಣುತ್ತಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.