ADVERTISEMENT

ಚುರುಮುರಿ | ಅನುದಾನ ಸಂತಾನ!

ಚಂದ್ರಕಾಂತ ವಡ್ಡು
Published 26 ಜನವರಿ 2025, 22:30 IST
Last Updated 26 ಜನವರಿ 2025, 22:30 IST
.
.   

ಬೈಟೂ ಕಾಫಿ ಟೇಬಲ್ಲು ಅದ್ಯಾಕೋ ವಿಚಾರಸಂಕಿರಣ ಆಗಿ ಮಾರ್ಪಟ್ಟಿತ್ತು.

‘ನಮ್ಮ ರಾಜ್ಯದ ಜನಸಂಖ್ಯೆ ಕಡಿಮೆಯಾಗಿ ಕೇಂದ್ರದ ಅನುದಾನ ಕಡಿತವಾಗಿದೆ. ಹೆಚ್ಚಿನ ಜನಸಂಖ್ಯೆಯ ರಾಜ್ಯಗಳ ಕಣ್ಣಿಗೆ ಬೆಣ್ಣೆ, ಕಡಿಮೆ
ಜನಸಂಖ್ಯೆಯ ರಾಜ್ಯಗಳ ಕಣ್ಣಿಗೆ ಸುಣ್ಣ ಎಂಬಂತೆ ಆಗಿದೆ. ಜನಸಂಖ್ಯೆ ನಿಯಂತ್ರಣ ಮಾಡಿದ್ದಕ್ಕೇ ನಮಗೆ ಹೊಡೆತ…’ ತಿಂಗಳೇಶನ ದಿಕ್ಸೂಚಿ ಮಾತಿನಿಂದ ಸಭೆಯಲ್ಲಿ ಚಿಂತೆ ಆವರಿಸಿತು.

‘ಅಂದ್ರೆ… ಹೆಚ್ಚಿನ ಅನುದಾನಕ್ಕೆ ಜನಸಂಖ್ಯೆ ಹೆಚ್ಚಿಸಿಕೊಳ್ಳಬೇಕು, ಜನಸಂಖ್ಯೆ ಹೆಚ್ಚಳಕ್ಕೆ ಶಿಕ್ಷಣದ ಪ್ರಮಾಣ ಕಡಿಮೆ ಮಾಡಬೇಕು’‌ ಬದ್ರಿ ಎಂದಿನಂತೆ ದಿಕ್ಕು ತಪ್ಪಿಸಿದ.

ADVERTISEMENT

‘ಅದಕ್ಕೆಂದೇ ಕನ್ನಡ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ’ ಆಡಳಿತ ಪಕ್ಷದ ಅಂಜಿನಿಯ ಸಮರ್ಥನೆ.

‘ವೇದಿಕೆಯಲ್ಲಿ ಹಚ್ಚೇವು ಕನ್ನಡದ ದೀಪ… ಆದೇಶಗಳಲ್ಲಿ ಮುಚ್ಚೇವು ಕನ್ನಡದ ಶಾಲೆ…’ ಚನ್ನಬಸಣ್ಣನ ಬಾಯಲ್ಲಿ ವಿಷಾದಗೀತೆ.

‘ಇತ್ತೀಚೆಗೆ ಕನ್ನಡ ಓದುಗರ ಸಂಖ್ಯೆಯೂ ಕುಸಿಯುತ್ತಿದೆ. ಓದುಗರಿಗಿಂತ ಲೇಖಕರ ಸಂಖ್ಯೆಯೇ ಹೆಚ್ಚಾಗಿದೆಯಂತೆ, ಸಾಹಿತಿಗಳಿಗಿಂತ ಪ್ರಶಸ್ತಿಗಳೇ ಹೆಚ್ಚಾಗಿವೆಯಂತೆ…!’ ಸಾಹಿತಿ ಕೊಟ್ರೇಶಿಯನ್ನು ಕೆಣಕಿದ ರಾಜಣ್ಣ.

‘ಜನಗಣತಿಯಲ್ಲಿ ಓದುಗರ, ಲೇಖಕರ ಮತ್ತು ಪ್ರಶಸ್ತಿಗಳ ಗಣತಿಯೂ ಸೇರ್ಪಡೆಯಾಗಲಿ. ಅಲ್ಲಿಯವರೆಗೆ ಆಯೋಗದ ವರದಿಯ ಅಂಗೀಕಾರ ಬೇಡ’ ಯಾರೋ ಸಿದ್ದರಾಮಣ್ಣ ಸಂಪುಟದ ನೆರವಿಗೆ ಧಾವಿಸಿದರು!

‘ಕೆಲವರ್ಷ ಪುಸ್ತಕಗಳ ಪ್ರಕಟಣೆ ನಿಲ್ಲಿಸಬೇಕೆಂಬ ಸಲಹೆಯೂ ಕೇಳಿಬಂದಿದೆ’ ಮತ್ತೊಂದು ದನಿ.

‘ಪುಸ್ತಕಗಳ ಬದಲು ಸಾಹಿತಿಗಳು ಮಕ್ಕಳನ್ನು ಹೆತ್ತರೆ ಎಲ್ಲಾ ಸರಿಹೋಗಬಹುದು ಅಂತೀರಾ?’ ಕೊಟ್ರೇಶಿಯ ವ್ಯಂಗ್ಯವನ್ನು ಸಭೆ ಗಂಭೀರವಾಗಿಯೇ ಪರಿಗಣಿಸಿತು.

ವಿಚಾರ ‘ಸಂಕೀರ್ಣ’ ಆಗುವುದನ್ನು ತಪ್ಪಿಸಲು ತಿಂಗಳೇಶ, ‘ಅಷ್ಟೇ ಅಲ್ಲ, ‘ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗ’ ಘೋಷಣೆಯನ್ನು ‘ಕತೆಗೊಬ್ಬ ಮಗ, ಕವಿತೆಗೊಬ್ಬ ಮಗಳು, ಅನುದಾನಕ್ಕೆ ಹತ್ತು ಸಂತಾನ’ ಎಂದು ಬದಲಿಸೋಣ’ ಎಂದು ಮುಗಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.