ಚುರುಮುರಿ: ನಕಲು–ಅಸಲು!
‘ಇನ್ನೇನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು ನಿಲ್ಲಲಿದೆ’ ಬೈಟು ಬಳಗದ ಚರ್ಚೆಗೆ ಚಾಲನೆ ನೀಡಿದ ತಿಂಗಳೇಶ.
‘ಹೌದು, ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯವರು ತೇರ್ಗಡೆಗೆ 33 ಅಂಕ ನಿಗದಿಪಡಿಸಿ ಮಕ್ಕಳ ಮತ್ತು ಮೌಲ್ಯಮಾಪಕರ ಹೊರೆ ಕಡಿಮೆ ಮಾಡಿದ್ದಾರೆ’.
‘ಇದರಿಂದ ಪೋಷಕರ ಹೊರೆಯೂ ಕಡಿಮೆಯಾಗಲಿದೆ. ಶಾಲೆಯ ಫಲಿತಾಂಶದ ಗುರಿಗಾಗಿ ಸಾಮೂಹಿಕ ನಕಲಿಗೆ ಮೊರೆ ಹೋಗುತ್ತಿದ್ದ ಶಿಕ್ಷಕರ ಭಾರವೂ ಇಳಿಯಲಿದೆ’.
‘ಅಂದ್ರೇ… ನಕಲು ನಿಲ್ಲಿಸುವ ಅಸಲು ಉಪಾಯ!’.
‘ಫಲಿತಾಂಶ ಕುಸಿತದಿಂದ ಪಾರಾಗಬಹುದು. ಆದರೆ, ಲಿಖಿತ ಪರೀಕ್ಷೆಯಲ್ಲಿ 13 ಅಂಕ ಪಡೆದು ಪಾಸಾಗುವ ವಿದ್ಯಾರ್ಥಿಗಳಿಂದ ಶಿಕ್ಷಣದ ಮೌಲ್ಯ ಕುಸಿಯುವುದಿಲ್ಲವೇ?’
‘ಹಾಗೇನಿಲ್ಲ, ಈ ನಿರ್ಧಾರದಲ್ಲಿ ಕುವೆಂಪು ವೈಚಾರಿಕತೆ ಬೆಳೆಸುವ ಉನ್ನತ ಮೌಲ್ಯ ಅಡಗಿದೆ. ಶಿಕ್ಷಣ ಹೆಚ್ಚಾದಷ್ಟೂ ಕಂದಾಚಾರ ಹೆಚ್ಚಾಗಿ ವೈಜ್ಞಾನಿಕ ಪ್ರಜ್ಞೆ ಕಡಿಮೆಯಾಗುವುದನ್ನು ಮುಖ್ಯಮಂತ್ರಿಗಳೇ ಗುರುತಿಸಿಲ್ಲವೇ? ಹಾಗಾಗಿ, ಶಿಕ್ಷಣದ ಗುಣಮಟ್ಟ ಕಡಿಮೆ ಮಾಡಿ ವೈಚಾರಿಕತೆ ಬೆಳೆಸುವ ವಿನೂತನ ಪ್ರಯೋಗವಿದು…’
‘ಆದ್ರೂ… ಮೊಬೈಲ್‌ಗಳಲ್ಲಿ ಮುಳುಗಿರುವ ವಿದ್ಯಾರ್ಥಿಗಳು 33 ಅಂಕ ಪಡೆಯೋದೂ ಅನುಮಾನ ಅನ್ನಿಸುತ್ತದೆ’.
‘ಅದಕ್ಕೂ ಒಂದು ಪರಿಹಾರ ಕಂಡುಕೊಂಡರೆ ಆಯ್ತು ಬಿಡು’.
‘ಅದೇನಪ್ಪಾ ಅದು… ಅಂಥಾ ಚಮತ್ಕಾರ… ‘ಸೆಪ್ಟೆಂಬರ್ ಕ್ರಾಂತಿ’ ಥರ ಮಾತಾಡ್ತೀಯಾ…!’
‘ಅದು ಅಧಿಕಾರ ಹಸ್ತಾಂತರದಷ್ಟು ಸಂಕೀರ್ಣ ವಿಷಯವಲ್ಲ; ಬಿಕ್ಕಟ್ಟು ನಿವಾರಿಸಲು ಆಯೋಗ ರಚಿಸಿದಷ್ಟೇ ಸುಲಭ. ಎಲ್ಲಾ ಶಾಲೆಗಳ ಗ್ರಂಥಾಲಯಗಳನ್ನು ಖಾಲಿ ಮಾಡಿಸುವುದು ಮೊದಲ ಸ್ಟೆಪ್’.
‘ಮುಖ್ಯಮಂತ್ರಿಗಳ ‘ಕಡಿಮೆ ಶಿಕ್ಷಣ-ಹೆಚ್ಚಿನ ವೈಚಾರಿಕತೆ’ ನೀತಿಗೆ ಅನುಗುಣವಾಗಿದೆ! ಮುಂದ…?’
‘ಗ್ರಂಥಾಲಯಗಳ ಜಾಗದಲ್ಲಿ ಪ್ರಾರ್ಥನಾ ಮಂದಿರಗಳ ಸ್ಥಾಪನೆ ಮಾಡುವುದು ಎರಡನೇ ಸ್ಟೆಪ್’
‘ಓಹ್…! ಉಪ ಮುಖ್ಯಮಂತ್ರಿಗಳ ನೀತಿಯಂತೆ ‘ಕಡಿಮೆ ಪ್ರಯತ್ನ-ಹೆಚ್ಚಿನ ಪ್ರಾರ್ಥನೆ’ ಅಳವಡಿಕೆ!’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.