ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮಹಾತ್ಮ ಗಾಂಧಿ ಒಬ್ಬರೇ ಕುಳಿತಿದ್ದನ್ನ ಕಂಡ ಪತ್ರಕರ್ತ ತೆಪರೇಸಿ, ಇವರನ್ನ ಇಂಟ್ರೂ ಮಾಡಿದ್ರೆ ‘ಬಿಗ್ ಎಕ್ಸ್‌ಕ್ಲೂಸಿವ್’ ಆಗುತ್ತೆ ಅಂದುಕೊಂಡು ಪಟ್ ಅಂತ ಅವರ ಮುಂದೆ ಮೈಕ್ ಹಿಡಿದ. ‘ನಾನು ಬ್ರೇಕಿಂಗ್ ನ್ಯೂಸ್ ಟೀವಿ ರಿಪೋಟ್ರು, ನಿಮ್ ಇಂಟ್ರೂ ಬೇಕಿತ್ತು...’
‘ಬ್ರೇಕಿಂಗ್ ನ್ಯೂಸಾ? ಏನೇನ್ ಬ್ರೇಕ್ ಮಾಡ್ತೀರಿ?’ ಗಾಂಧಿ ಕೇಳಿದರು.
‘ಏನ್ ಸಿಕ್ರೂ ಮಾಡ್ತೀವಿ... ರಾಜಕಾರಣ, ಜಾತಿ–ಧರ್ಮ, ದೇವರು–ದೇವಸ್ಥಾನ–ಬುರುಡೆ, ದೇಶ–ಭಾಷೆ, ಗಂಡ–ಹೆಂಡ್ತಿ ಸಂಬಂಧ... ಎಲ್ಲ ಬ್ರೇಕ್ ಮಾಡ್ತೀವಿ’ ತೆಪರೇಸಿ ಹೆಮ್ಮೆಯಿಂದ ಹೇಳಿದ.
‘ಹೌದಾ? ಬ್ರೇಕ್ ಮಾಡೋಕೆ ನನ್ನತ್ರ ಏನೂ ಇಲ್ಲ, ಇರೋದು ಒಂದು ಲಂಗೋಟಿ...’ ಗಾಂಧಿ ನಕ್ಕರು.
‘ಅದಿರ್ಲಿ, ಒಬ್ರೇ ಒಂಟಿಯಾಗಿ ಯಾಕೆ ಕೂತಿದೀರಿ?’
‘ಸತ್ಯ, ಅಹಿಂಸೆ ಯಾವಾಗ್ಲೂ ಒಂಟೀನೆ...’
‘ಮರೆತಿದ್ದೆ, ನಿಮ್ ಆತ್ಮಕಥನಕ್ಕೆ 100 ವರ್ಷ ಆತಂತೆ?’
‘ನೂರಾ ಒಂದೂ ಆಗುತ್ತೆ, ಏನೀಗ?’
‘ಇದೇ ಹೊತ್ತಲ್ಲಿ ಲಂಡನ್‌ನಲ್ಲಿ ನಿಮ್ ಪ್ರತಿಮೆ ಒಡೆದು ಹಾಕಿದ್ದಾರೆ...’
‘ಗುಂಡಿಟ್ಟು ಕೊಂದದ್ದಕ್ಕಿಂತ ಪ್ರತಿಮೆ ಒಡೆದದ್ದು ದೊಡ್ಡದಾ?’
‘ಹಾಗಲ್ಲ, ತೀರಾ ಗಾಂಧಿ ಅಂದ್ರೆ ಬೆಲೆ ಇಲ್ವಾ?’
‘ಇದೆಯಲ್ಲ, ಗಾಂಧಿ ಕ್ಲಾಸು, ಗಾಂಧಿ ಸರ್ಕಲ್ಲು, ಗಾಂಧಿ ಭವನ, ಗಾಂಧಿ ರಸ್ತೆ...’
‘ಹೋಗ್ಲಿ ಬಿಡಿ, ನಿಮಗೆ ಖುಷಿಯ ವಿಷಯ ಯಾವುದು?’
‘ಈ ದೇಶದ ಜನ ಇನ್ನೂ ನನ್ನ ಲಂಗೋಟಿ ಉಳಿಸಿದಾರಲ್ಲ ಅನ್ನೋದು...’
‘ನೀವು ಸಾಯುವಾಗ ‘ಹೇ ರಾಮ್’ ಅಂದ್ರಲ್ಲ...’
‘ಅಂದೆ, ನನ್ನ ರಾಮ ಬೇರೆ, ನಿಮ್ಮ ರಾಮನೇ ಬೇರೆ...’
‘ಸರಿ, ಈಗ ಧರ್ಮ ಅಂದ್ರೇನು?’
‘ರಾಜಕಾರಣದ ಆಯುಧ...’
‘ರಾಜಕಾರಣ ಅಂದ್ರೆ?'
‘ಧರ್ಮದ ಮೂಲಕ ಅಧಿಕಾರ’.
‘ಥೋ... ನಂಗೆ ಏನೂ ಅರ್ಥ ಆಗ್ಲಿಲ್ಲ, ಹೋಗ್ಲಿ, ಈಗ ಸ್ವಾತಂತ್ರ್ಯ ಅಂದ್ರೇನು?’
‘ನೀನೀಗ ನನ್ನ ಪಾಡಿಗೆ ನನ್ನ ಬಿಡೋದು...’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.