ADVERTISEMENT

ಚುರುಮರಿ: ಬಲ ನೀಡು ಭಗವಂತ

ಮಣ್ಣೆ ರಾಜು
Published 23 ಫೆಬ್ರುವರಿ 2021, 19:45 IST
Last Updated 23 ಫೆಬ್ರುವರಿ 2021, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸ್ವಾಮೀಜಿ ಘೋರ ತಪಸ್ಸು ಮಾಡಿದರು. ತಪಸ್ಸಿಗೆ ಒಲಿದು ಭಗವಂತ ಪ್ರತ್ಯಕ್ಷನಾಗಿ, ‘ನಿಮಗೆ ಏನು ಬೇಕು?’ ಎಂದು ಕೇಳಿದ.

‘ಬಲ ನೀಡು ಭಗವಂತ’ ಸ್ವಾಮೀಜಿ ಕೋರಿದರು.

‘ಬಲ...?! ಯಾಕೆ?’

ADVERTISEMENT

‘ಉಳ್ಳವರು ಹೋರಾಟ ಮಾಡುವರು, ನಾನೇನು ಮಾಡಲಿ ಬಲಹೀನನಯ್ಯ...’ ಎಂದರು ಸ್ವಾಮೀಜಿ.

‘ಒಂದು ಸಮುದಾಯದ ಸ್ವಾಮೀಜಿಯಾದ ನೀವು ಬಲಹೀನರೇ?’ ಭಗವಂತನಿಗೆ ಅಚ್ಚರಿ.

‘ಹೌದು ಭಗವಂತ, ನಮ್ಮದು ಬಡ ಸಮುದಾಯ, ನಮ್ಮಲ್ಲಿ ಎಮ್ಮೆಲ್ಯೆ,
ಮಂತ್ರಿಗಳಿಲ್ಲ, ಉನ್ನತ ಅಧಿಕಾರಿಗಳಿಲ್ಲ, ಉದ್ಯಮಿಗಳಿಲ್ಲ, ಬಲಾಢ್ಯ ಭಕ್ತರಿಲ್ಲ, ಶಿಕ್ಷಣ ಸಂಸ್ಥೆಗಳಿಲ್ಲ, ಮುರುಕಲು ಮಠ, ಹರಕಲು ಪೀಠ. ಹೀಗಿರುವಾಗ ಬಲ ಹೇಗೆ ಬಂದೀತು...?’

‘ನೀವು ಯಾರ ಮೇಲೆ ಬಲ ಪ್ರಯೋಗ ಮಾಡಬೇಕು?’

‘ಸರ್ಕಾರದ ಮೇಲೆ ಒತ್ತಡ ಹಾಕಲು ಬಲ ಬೇಕು. ನಮ್ಮ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಹೆಚ್ಚಿಸಲು, ಅಭಿವೃದ್ಧಿ ನಿಗಮ ಸ್ಥಾಪಿಸಲು, ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮುದಾಯವನ್ನು ಮೇಲೆ ತರಲು ಸರ್ಕಾರವನ್ನು ಒತ್ತಾಯ ಮಾಡಬೇಕು’.

‘ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ನಿಮ್ಮ ಸಮುದಾಯದ ಸಂಕಷ್ಟವನ್ನು ಮನವರಿಕೆ ಮಾಡಿಕೊಡಿ’.

‘ಅದು ಸುಲಭವಲ್ಲ ಭಗವಂತ, ಪ್ರಭಾವಿ ಸಮುದಾಯದವರು ಹೋರಾಟದ ಮುಂಚೂಣಿ ಯಲ್ಲಿದ್ದಾರೆ. ಅವರ ಗಲಾಟೆಯಲ್ಲಿ ನಮ್ಮ ಕೀರಲು ಧ್ವನಿ ಸರ್ಕಾರಕ್ಕೆ ಹೇಗೆ ಕೇಳಿಸುತ್ತೆ...?’

‘ನಿಮಗೆ ಧ್ವನಿವರ್ಧಕದ ಅಗತ್ಯವಿದೆ’.

‘ಹೌದು, ನಮ್ಮ ಸಮುದಾಯದಲ್ಲಿ ಸಂಘಟನೆ, ಪ್ರತಿಭಟನೆ, ಧ್ವನಿವರ್ಧನೆ ಇಲ್ಲ. ನಮ್ಮಂಥವರಿಗೆ ದೇವರೇ ದಿಕ್ಕು. ನೀನಾದರೂ ನಮ್ಮ ಸಮುದಾಯಕ್ಕೆ ಮೀಸಲಾತಿ ಸೌಕರ್ಯ ಹೆಚ್ಚು ಮಾಡಿ ಸಮುದಾಯವನ್ನು ಉದ್ಧಾರ ಮಾಡು ಭಗವಂತಾ...’

‘ಅಯ್ಯೋ...! ಬೇಕಾದ್ರೆ ಆಯುಷ್ಯ, ಆರೋಗ್ಯ ಕರುಣಿಸುತ್ತೇನೆ, ಮೀಸಲಾತಿ ಮಾತ್ರ ಕೇಳಬೇಡಿ. ನಿಮಗೆ ಕೊಟ್ಟರೆ ಉಳಿದವರು ಬೆನ್ನಿಗೆ ಬಿದ್ದು ನನ್ನ ನೆಮ್ಮದಿ ಹಾಳುಮಾಡುತ್ತಾರೆ...’ ಎನ್ನುತ್ತಾ ಭಗವಂತ ಮಾಯವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.