ADVERTISEMENT

ಚುರುಮುರಿ | ಕೋಟಿ ರೂ ಗಡಿಯಾರ

ಆನಂದ ಉಳಯ
Published 23 ನವೆಂಬರ್ 2021, 21:00 IST
Last Updated 23 ನವೆಂಬರ್ 2021, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಇದೇನ್ರೀ ಒಂದು ಗಡಿಯಾರಕ್ಕೆ 5 ಕೋಟಿ ರೂಪಾಯಿ?’ ಹೆಂಡತಿ ಕೇಳಿದಳು.

‘ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಗಡಿಯಾರ ತಾನೇ? ಅದು ಕೇವಲ 1.5 ಕೋಟಿ ರೂಪಾಯಿ’.

‘ಗಡಿಯಾರಕ್ಕೆ ಅಷ್ಟು ದುಡ್ಡೇ?’

ADVERTISEMENT

‘ಕಾಸಿಗೆ ತಕ್ಕ ಕಜ್ಜಾಯ, ಬೆಲೆಗೆ ತಕ್ಕ ಗಡಿಯಾರ’ ನಾನು ಸಮಾಧಾನಿಸಿದೆ.

‘ಒಂದಾನೊಂದು ಕಾಲದಲ್ಲಿ ಎಚ್‍ಎಂಟಿ 100 ರೂಪಾಯಿಗೆ ಜನತಾ ಗಡಿಯಾರ ಕೊಡ್ತಿತ್ತು ನೆನಪಿದೆಯೆ?’

‘ಅದನ್ನು ಕಟ್ಟಿದ್ದೂ ನೆನಪಿದೆ. ಮದುವೇಲಿ ನನ್ನ ಮಾವ ಅರ್ಥಾತ್ ನಿಮ್ಮ ತಂದೆ ಅದನ್ನೇ ತಾನೇ ಕೊಟ್ಟಿದ್ದು’ ಎಂದು ನೆನಪಿಸಿದೆ.

‘ಕೊಂಕು ಸಾಕು, ಅದೂ 24 ಗಂಟೇನೇ ತಾನೆ ತೋರಿಸ್ತಾ ಇದ್ದದ್ದು? ಮತ್ತೆ ಈ 5 ಕೋಟಿ, ಸಾರಿ ಕೇವಲ 1.5 ಕೋಟಿ ರೂಪಾಯಿ ವಾಚ್ ಎಷ್ಟು ಗಂಟೆ ತೋರಿಸುತ್ತೆ?’ ಎಂಬ ಗಹನವಾದ ಪ್ರಶ್ನೆ ಮುಂದಿಟ್ಟಳು.

‘ವೈ ಡೌಟ್? ಅದೂ ಎಚ್‍ಎಂಟಿ ಜನತಾ ಗಡಿಯಾರದ ತರಹ 24 ಗಂಟೇನೇ ತೋರಿಸೋದು’ ಎಂದು ವಿವರಿಸಿದೆ.

‘ಮತ್ತೆ ಅದಕ್ಕೆ ಅಷ್ಟೊಂದು ದುಡ್ಡು ಸುರಿಯಬೇಕೆ? ಗಡಿಯಾರ ಟೈಂ
ತೋರಿಸೋದಕ್ಕಷ್ಟೆ ತಾನೇ ಇರೋದು?’ ಎಂಬ ಸಹಜವಾದ ಪ್ರಶ್ನೆ ಮುಂದಿಟ್ಟಳು.

‘ಇಬ್ಬರು ಮೂವರು ಇರೋರು ಯಾಕೆ 4-5 ಬೆಡ್‌ರೂಮ್‌ ಮನೆ ಕಟ್ತಾರೆ?’ ಎಂದು ಕೌಂಟರ್ ಕ್ವಶ್ಚನ್ ಕೇಳಿದೆ.

‘ಮನೆ ದೊಡ್ಡದಾಗಿದ್ದಷ್ಟೂ ಪ್ರತಿಷ್ಠೆ ಹೆಚ್ಚೋಲ್ವೆ?’

‘ಹಾಗೇ ಗಡಿಯಾರ ಸಹ’.

‘ಅಲ್ರೀ, ಮನೆ ದೊಡ್ಡದಿದ್ದಾಗ ಹೋಗೋರು ಬರೋರಿಗೆಲ್ಲ ಗೊತ್ತಾಗುತ್ತೆ ಯಾರೋ ಭಾರಿ ಕುಳ ಇದರ ಓನರ್ರೂ ಅಂತ. ಯಾವ ಗಡಿಯಾರ ಕಟ್ಟಿದರೂ ಅದರ ಬೆಲೆ ಯಾರಿಗೆ ತಿಳಿಯುತ್ತೆ? ಓನರ್ ಹೇಳಬೇಕು ಅಥವಾ ಯಾರಾದರೂ ಕೇಳಬೇಕು. ಯಾರು ಕೇಳ್ತಾರೆ?

‘ಹಾಗಿದ್ದರೆ ಮದುವೆಗೇಕೆ ರೇಷ್ಮೆ ಸೀರೇನೆ ಬೇಕು?’

‘ಹೋಗ್ರೀ, ಯಥಾಪ್ರಕಾರ ಸೀರೆ ವಿಷಯಕ್ಕೇ ಬರ್ತೀರಿ’ ಎಂದು ವಾದ ಮುಗಿಸಿದಳು.

ಆದರೆ ಗಡಿಯಾರಕ್ಕೆ ಕೋಟಿ ಯಾಕೆ ಎಂದು ನನಗೂ ಗೊತ್ತಾಗಲಿಲ್ಲ, ನಿಮಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.