ADVERTISEMENT

ಚುರುಮುರಿ: ಯಾರು ಪ್ರಬಲರು?

ಎಸ್.ಬಿ.ರಂಗನಾಥ್
Published 11 ಫೆಬ್ರುವರಿ 2022, 20:15 IST
Last Updated 11 ಫೆಬ್ರುವರಿ 2022, 20:15 IST
Churumuri 12022022 Illustrated: Kanakalmath
Churumuri 12022022 Illustrated: Kanakalmath   

‘ಈಚೀಚೆಗೆ ಮಹಿಳೆಯರದೇ ಕಾರುಬಾರು ಜೋರಾಗಿ ನಡೆಸಿದೀರಿ’, ಬೆಳ್ಳಂಬೆಳಗ್ಗೆ ಶ್ರೀಮತಿಯ ಕಾಲೆಳೆದೆ.

‘ನಮ್ಮನ್ನು ಟೀಕಿಸದಿದ್ರೆ ನಿಮ್ಗೆ ಉಂಡದ್ದು ಅರಗೋಲ್ಲ ಅಲ್ವೇ? ಅದೇನ್ರೀ ಜೋರಾಗಿರೋದು?’ ಎಂದು ಹರಿಹಾಯ್ದಳು.

‘ನಿರ್ಮಲಾ ಮೇಡಂ ಪಾರ್ಲಿಮೆಂಟಲ್ಲಿ, ನೀರು ಕುಡೀತಾ ಬಜೆಟ್ ಮಂಡಿಸಿ ನಮಗೆಲ್ಲ ನೀರು ಕುಡಿಸಿದ್ರಲ್ಲಾ... ಪ್ರಿಯಾಂಕಾ ವಾದ್ರಾ ಉತ್ತರಪ್ರದೇಶದಲ್ಲಿ ಅವರ ಪಕ್ಷ ಗೆದ್ದರೆ ಸರ್ಕಾರಿ ನೌಕರಿಯಲ್ಲಿ ಮಹಿಳೆಯರಿಗೆ ಶೇಕಡ 40 ಮೀಸಲಾತಿ ನೀಡ್ತಾರಂತೆ...’

ADVERTISEMENT

‘ಅವೆಲ್ಲಾ ಚುನಾವಣಾ ಗಿಮಿಕ್!’

‘ಈ ಚುನಾವಣೆ ಸಮಯದಲ್ಲಿ ಸ್ಮಿತಾ ಪ್ರಕಾಶ್ ದಾಖಲೆ ಮಾಡಿಬಿಟ್ರಲ್ಲಾ!’

‘ಯಾರೀಕೆ?’

‘ಇವರು ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ ಸುದ್ದಿ ಸಂಸ್ಥೆಯ ಎಡಿಟರ್ ಇನ್ ಚೀಫ್. ಮೊನ್ನೆ, ಯಾವ ಗಂಡಸಿಗೂ ಸಾಧ್ಯವಾಗದ ಮೋದಿ ಅವರ ಪತ್ರಿಕಾ ಸಂದರ್ಶನ ಮಾಡಿದಾರೆ!’

‘ಹೌದು, ಎಲ್ಲ ರಂಗಗಳಲ್ಲೂ ಮಹಿಳೆಯರೇ ಹೆಚ್ಚು ವಿಶ್ವಾಸಾರ್ಹರು. ಅವ್ರು ಮುಂದೆ ಬಂದರೆ ಮಾತ್ರ ನಿಮ್ಮ ಪ್ರಾಬಲ್ಯ ಕಡಿಮೆಯಾಗಿ ದೇಶ ಉದ್ಧಾರ ಆಗೋದು’.

‘ಆದ್ರೆ ಸ್ಮೃತಿ ಇರಾನಿ ಮೇಡಂ ನಮ್ಗೆ ಸರ್ಟಿಫಿಕೇಟ್ ಕೊಟ್ಟಿದಾರೆ! ಕೌಟುಂಬಿಕ ಅತ್ಯಾಚಾರ ಕುರಿತ ಐಪಿಸಿ 375 ಕಲಮಿಗೆ ವಿನಾಯಿತಿ ಕೊಟ್ಟಿರೋ ವಿಚಾರದ ಬಗ್ಗೆ ಮಾತಾಡ್ತಾ, ಗಂಡಸರೆಲ್ಲಾ ಅತ್ಯಾಚಾರಿಗಳು ಅನ್ನೋದು ಸರಿಯಲ್ಲ ಅಂದಿದಾರೆ’.

‘ಏನು ಸರಿಯಿಲ್ಲಾರೀ, ದಿಲ್ಲಿ ಹೈಕೋರ್ಟಲ್ಲಿ ಈ ಕುರಿತು ನಡೀತಿರೋ ವಿಚಾರಣೇಲಿ, ಐಪಿಸಿಯಲ್ಲಿರೋ ಈ ಅಸಾಂವಿಧಾನಿಕ ವಿನಾಯ್ತಿಯಿಂದ ಮಹಿಳೆಯರ ಘನತೆ, ಗೌರವಕ್ಕೆ ತೀವ್ರ ಧಕ್ಕೆಯುಂಟಾಗ್ತಿದೆ, ಅದನ್ನ ತೆಗೆದುಹಾಕ್ಬೇಕೂಂತ ವಕೀಲೆ ಕರುಣಾ ನಂದಿ ವಾದಿಸ್ತಿಲ್ವೇ?!’

‘ಅವ್ರೂ ನಿನ್ನಂತೆ ಮಹಿಳಾ ಸಮಾನತೆಯ ಉಗ್ರ ಚಾಂಪಿಯನ್ ಅಲ್ವೇ?!’ ಶ್ರೀಮತಿಯ ಕೈಯಿಂದ ಬಂದ ತಲೆದಿಂಬಿನ ರಾಕೆಟ್ ದಾಳಿಯನ್ನು ಉಪಾಯದಿಂದ ತಪ್ಪಿಸಿಕೊಂಡೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.