ADVERTISEMENT

ಚುರುಮುರಿ: ಕೇಬಲ್‍ನವನಂತೆ...

ಆನಂದ ಉಳಯ
Published 16 ಅಕ್ಟೋಬರ್ 2022, 23:30 IST
Last Updated 16 ಅಕ್ಟೋಬರ್ 2022, 23:30 IST
   

‘ಟಿ.ವಿ ಬಂದ್ ಆಗಿದೆ. ಕೇಬಲ್‍ನವನಿಗೆ ಫೋನಾ ಯಿಸಿದೆಯಾ?’ ಎಂದು ಮಡದಿಯನ್ನು ಕೇಳಿದೆ.

‘ಅವನು, ಬೊಮ್ಮಾಯಿ ತರಹ ಉತ್ತರ ಕೊಡ್ತಾನೆ’ ಎಂದಳು.

‘ಬೊಮ್ಮಾಯಿ ತರಹ?!’

ADVERTISEMENT

‘ಅದೇರಿ, ಆದಷ್ಟು ಬೇಗ ಎಂದವರು ಪದೇ ಪದೇ ಹೇಳ್ತಿಲ್ಲವೆ? ಅದೇ ತರಹ ಕೇಬಲ್‍ನವನು ಹೇಳ್ತಿದಾನೆ’ ಎಂದಳು.

‘ರಸ್ತೆಗುಂಡಿಗಳ ರಿಪೇರಿ ಬಗ್ಗೆ ಬೊಮ್ಮಾಯಿ...?’

‘ಅದಲ್ಲಾರಿ. ಕ್ಯಾಬಿನೆಟ್ ರೀಷಫಲ್. ಆದಷ್ಟು ಬೇಗ ಮಾಡ್ತೀವಿ ಅಂತ ಅವರು ಹೇಳ್ತಿಲ್ಲವೇ ಹಾಗೆ ಈ ಕೇಬಲ್‍ನವನು ಸಹ’ ಎಂದಳು.

ಈಕೆಯ ರಾಜಕೀಯ ಪ್ರಜ್ಞೆ, ಹಾಸ್ಯ ಪ್ರಜ್ಞೆ ಎರಡೂ ನಂದಿನಿ ತುಪ್ಪದ ಬೆಲೆಯಂತೆ ಡಬಲ್ ಆಗಿವೆ ಎನಿಸಿತು.

‘ಸಿ.ಎಂ. ಕಷ್ಟ ಅವರಿಗೇ ಗೊತ್ತು. ಅದಕ್ಕೇ ಹಾಗೆ ಅಂತಿದ್ದಾರೆ’ ಎಂದೆ ಪಕ್ಷದ ವಕ್ತಾರನಂತೆ.

‘ಎಷ್ಟು ದಿನಾಂತ ಕಾಯೋದು ಆಕಾಂಕ್ಷಿಗಳು? ಅವರ ಅವಧಿನೂ ಮುಗೀತಿದೆ. ಬಂಗಲೆಗೆ ಶಿಫ್ಟ್ ಆಗಿ, ಅಲ್ಲಿ ಗೂಟದ ಕಾರು ನಿಂತು, ಅವರ ಹಿಂದೆ ಮುಂದೆಸೆಕ್ಯುರಿಟಿ ಓಡಾಡಿ, ಮಂತ್ರಿಯಾಗಿ ಟೇಪ್ ಕತ್ತರಿಸೋದಿಕ್ಕೆ ಹೋಗೋದು ಯಾವಾಗ...?’

‘ನಿಜ ನಿಜ...’

‘ಮತ್ತೆ ಶೀಘ್ರ ಶೀಘ್ರ ಅಂತ ಹೇಳ್ತಾನೇ ಇದ್ದರೆ ಹೇಗೆ? ಈ ಭಾವಿ ಮಂತ್ರಿಗಳ ಹೆಂಡತಿಯರು ಎಷ್ಟು ದಿನಾಂತ ಶಾಸಕರ ಪತ್ನಿ ಅಂತಾನೇ ಕರೆಸಿಕೊಳ್ಳುತ್ತಿರಬೇಕು’ ಎಂದಳು.

‘ಇನ್ನಾರು ತಿಂಗಳಲ್ಲಿ ಎಲ್ಲರ ಅವಧಿ ಮುಗಿಯುತ್ತೇರಿ. ಈ ತಿಂಗಳು ಇವರು ಮಂತ್ರಿ ಆದರೂ 3-4 ತಿಂಗಳಷ್ಟೇ ಅವರ ಕಾರುಬಾರು...’

‘ಇನ್ನು 3 ತಿಂಗಳ ಅವಧೀನ ಏಕೆ ಮೊಟಕು ಮಾಡಿದೆ?’

‘ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಇವರಿಗೇನು ಕೆಲಸ ಇರುತ್ತೆ ಮಂತ್ರಿಯಾಗಿ? ಮನೆ ಮುಂದೆ ಬೋರ್ಡ್ ಇರುತ್ತೆ ಅಷ್ಟೆ’.

‘ಆದರೂ ಇನ್ನೂ ಆಸೆ ಇಟ್ಟುಕೊಂಡಿದಾರೆ ನೋಡು’ ಎಂದೆ.

‘ಅದಕ್ಕೇ ಬೊಮ್ಮಾಯಿ ಆದಷ್ಟು ಶೀಘ್ರ ಅಂತ ಹೇಳ್ತಿರೋದು’.

‘ಕೇಬಲ್‍ನವನಂತೆ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.