ADVERTISEMENT

ಚುರುಮುರಿ | ಕ್ರಿಕೆಟ್ ನಸೀಬು

ಆನಂದ ಉಳಯ
Published 16 ಫೆಬ್ರುವರಿ 2022, 20:00 IST
Last Updated 16 ಫೆಬ್ರುವರಿ 2022, 20:00 IST
   

‘ನಮ್ಮ ಹುಡುಗನಿಗೂ ಕ್ರಿಕೆಟ್ ಕಲಿಸಬೇಕಿತ್ತುರೀ ಕಾಲೇಜಿಗೆ ಹಾಕೋ ಬದಲು’ ಎಂದು ಹೆಂಡತಿ ಮಾತಿಗೆ ಹಚ್ಚಿದಳು.

‘ಅವನೇನು ವಿರಾಟ್ ಕೊಹ್ಲಿ ಆಗುತ್ತಿದ್ದನೇನು? ಓದಿ ಒಂದು ಒಳ್ಳೇ ನೌಕರಿ ಹಿಡಿದು ಒಳ್ಳೆಯ ಸಂಬಳ ಪಡೆದರೆ ಸಾಲದೇ’ ಎಂದೆ.

‘ನಿಮ್ಮದು ಎನ್‍ಜಿಒ ಮೆಂಟಾಲಿಟಿ. ಬರೀ ಸಂಬಳ ನೆಚ್ಚಿಕೊಂಡಿದ್ದಿರಿ. ಮೇಲುಸಂಪಾದನೆ ಇರಲೇ ಇಲ್ಲ’ ಎಂದು ಸಿಡುಕಿದಳು.

ADVERTISEMENT

‘ಕ್ರಿಕೆಟ್‍ನಲ್ಲಿ ಮೇಲುಸಂಪಾದನೆ ಇರುತ್ತೇನು?’

‘ಬರೀ ಸಂಪಾದನೇನೇ ಸಾಕು. ನೋಡಿ, 2022 ಐಪಿಎಲ್‍ಗೆ ಆಟಗಾರರ ಹರಾಜು. ಬರೇ ಕೋಟೀಲೇ ಎಲ್ಲ ವ್ಯವಹಾರ. ‘ಪೇಪರಿನಲ್ಲಿ ಬರೀ ಕೊರೊನಾ, ಹಿಜಾಬ್, ರಾಜಕೀಯ ಓದಿದರೆ ಸಾಲದು, ಸ್ಪೋರ್ಟ್ಸ್‌ ಪೇಜಿನ ಕಡೆಗೂ ಗಮನ ಕೊಡಿ. ಅದ್ಯಾರೋ ಇಶಾನ್ ಕಿಶನ್ ಅಂತೆ 15 ಕೋಟಿ ರೂಪಾಯಿಗೆ ಕೊಂಡಿದ್ದಾರೆ ನೋಡಿ’.

‘ಕೊಳ್ಳೋದು ಅಂದರೆ?’

‘ಹರಾಜು ರೀ, ಬಿಡಿಎ ಸೈಟ್ ಹರಾಜು ಮಾಡೊಲ್ಲವೇ ಹಾಗೆ. ಒಬ್ಬೊಬ್ಬರಿಗೆ ಒಂದೊಂದು ರೇಟು. ಕಾಸಿಗೆ ತಕ್ಕ ಕಜ್ಜಾಯ ತರಹ ಇಲ್ಲಿ ಬ್ಯಾಟಿಗೆ ಬಾಲಿಗೆ ತಕ್ಕ ರೇಟು. ನೋಡಿ, ರಾಜ್ ಅಂಗದ ಬಾವಾ ಅನ್ನೋ ಹುಡುಗ ಇನ್ನೂ 19 ತುಂಬಿಲ್ಲ ಎರಡು ಕೋಟಿಗೆ ಬಿಕರಿ ಆಗಿದ್ದಾನೆ. ಇನ್ನೊಬ್ಬ ಅದೇ ವಯಸ್ಸಿನವನಿಗೆ 1.5 ಕೋಟಿ ಸಿಕ್ಕಿದೆ’.

‘ಅಷ್ಟು ದುಡ್ಡು ಕೊಟ್ಟರೆ ಎಷ್ಟು ದುಡೀಬೇಕೋ ಏನೋ?’

‘ಅಯ್ಯೋ! ಅದು 20-20 ಮ್ಯಾಚುರೀ. ಬೌಲರ್ ಆದರೆ 4 ಓವರ್ ಮೇಲೆ ಎಸೆಯೋ ಹಾಗಿಲ್ಲ. ಬ್ಯಾಟಿಂಗ್ ಆದರೆ 10 ಓವರ್ ಆಡಿದರೆ ಹೆಚ್ಚು, ಅಷ್ಟೇ’.

‘ಅಷ್ಟಕ್ಕೆ ಅಷ್ಟೊಂದು ದುಡ್ಡೇ?’

‘ಅದಕ್ಕೇ ನಾನು ಹೇಳಿದ್ದು. ನಮ್ಮ ಹುಡುಗನ್ನ ಕ್ರಿಕೆಟರ್ ಮಾಡಿದ್ದರೆ ನಾವೂ ಜುಂ ಅಂತ ಕೋಟಿಗಟ್ಟಲೆ ಎಣಿಸಬಹುದಿತ್ತು’.

‘ಆದರೆ ಸಚಿನ್ ಟೆಂಡೂಲ್ಕರ್ ಮಗನಿಗೆ ಸಿಕ್ಕಿದ್ದು 30 ಲಕ್ಷ ಅಷ್ಟೆ’ ಎಂದೆ. ಅವಳಿಗೆ ಶಾಕ್ ಆಯಿತು.

‘ಎಲ್ಲರಿಗೂ ನಸೀಬು ಇರೊಲ್ಲಮ್ಮಾ’ ಎಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.