ADVERTISEMENT

ಚುರುಮುರಿ: ಕಸಾಪ ಕಸರತ್ತು

ಮಣ್ಣೆ ರಾಜು
Published 17 ನವೆಂಬರ್ 2021, 17:07 IST
Last Updated 17 ನವೆಂಬರ್ 2021, 17:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ನವೆಂಬರ್ ಚಳಿಯಲ್ಲೂ ಕಸಾಪ ಚುನಾ ವಣೆಯ ಕಾವು ಇಲ್ಲ. ಬಹಿರಂಗ ಸಭೆಯ ಅಬ್ಬರವಿಲ್ಲ, ಬೈ ಎಲೆಕ್ಷನ್ ರೀತಿಯ ಬೈದಾಟವಿಲ್ಲ, ಚುನಾವಣೆ ಸಪ್ಪೆ ಅನ್ನಿಸುತ್ತಿಲ್ವೇ?’ ಸುಮಿ ಕೇಳಿದಳು.

‘ಇದು ಬಹಿರಂಗ ಸಭೆಯಲ್ಲಿ ಬೈದಾಡುವ ಎಲೆಕ್ಷನ್ ಅಲ್ಲ, ಕರಪತ್ರ ಕೊಟ್ಟು ಕರ ಮುಗಿದು ಮತ ಯಾಚಿಸುವ ಕನ್ನಡಿಗರ ಅಂತರಂಗದ ಚುನಾವಣೆ’ ಎಂದ ಶಂಕ್ರಿ.

‘ಕಸಾಪ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಮಾಡ್ತಿದ್ದಾರೋ ಸರ್ಕಾರದ ವಿರುದ್ಧ ಚಳವಳಿ ಮಾಡ್ತಿದ್ದಾರೋ ಅರ್ಥವಾಗ್ತಿಲ್ಲ ಕಣ್ರೀ...’ ಅಭ್ಯರ್ಥಿಗಳ ಕರಪತ್ರ ಓದಿ ಸುಮಿ ಹೇಳಿದಳು.

ADVERTISEMENT

‘ಕನ್ನಡದ ಕೆಲಸವೆಂದರೆ ಹೋರಾಟವೇ. ಯಾಕೀ ಅನುಮಾನ?’

‘ಅಲ್ಲಾ, ಜಾರಿಹೋಗುತ್ತಿರುವ ಕನ್ನಡ ದಾರಿಗೆ ಬರಬೇಕು, ಗಡಿ ಬಿಕ್ಕಟ್ಟು ಇತ್ಯರ್ಥ ಆಗಬೇಕು, ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂದೆಲ್ಲ ಸರ್ಕಾರವನ್ನು ಒತ್ತಾಯಿಸುವಂತಹ ವಿಚಾರಗಳೇ ಕರಪತ್ರಗಳಲ್ಲಿ ಕಾಣ್ತಿವೆ, ಅದ್ಕೆ ಕೇಳಿದೆ’.

‘ನಾಡುನುಡಿ ರಕ್ಷಣೆ ಕಸಾಪದ ಆದ್ಯತೆ ಅಲ್ವಾ?’

‘ಎಲ್ಲಾ ಸಾರ್ವಜನಿಕ ಚುನಾವಣೆಗಳಲ್ಲಿ ಅಭ್ಯರ್ಥಿಗಳು ರಸ್ತೆ- ಚರಂಡಿ ಮಾಡ್ತೀವಿ, ನೀರು, ಬೀದಿದೀಪದ ವ್ಯವಸ್ಥೆ ಮಾಡ್ತೀವಿ ಅನ್ನುವ ಹಾಗೆ ಪ್ರತೀ ಚುನಾವಣೆಯಲ್ಲೂ ಕಸಾಪ ಅಭ್ಯರ್ಥಿಗಳು ನಾಡು-ನುಡಿ ರಕ್ಷಣೆಯ ವಿಚಾರ ಬಿಟ್ಟು ಬೇರೆ ಹೇಳುತ್ತಿಲ್ಲವಲ್ಲಾ...’

‘ನಾಡು, ನುಡಿ, ಗಡಿ ಸಮಸ್ಯೆ ಬಗೆಹರಿದಿಲ್ಲ. ಹಿಂದಿ ಹೇರಿಕೆ, ಇಂಗ್ಲಿಷ್ ಸೇರಿಕೆಯಿಂದ ಕನ್ನಡ ಕಷ್ಟಕ್ಕೆ ಸಿಕ್ಕಿದೆ’.

‘ಮಹಿಳಾ ಸದಸ್ಯರ ಸಂಖ್ಯೆ ಹೆಚ್ಚಾಗಿ ಮಹಿಳೆಯರು ಕಸಾಪದ ಸಾರಥ್ಯ ವಹಿಸಿಕೊಳ್ಳುವ ಅವಕಾಶ ಸಿಕ್ಕಿದ್ದರೆ ಕನ್ನಡಕ್ಕೆ ಈ ಪರಿಸ್ಥಿತಿ
ಬರುತ್ತಿರಲಿಲ್ಲವೇನೋ...’

‘ಹೌದೇ?!’

‘ಹೌದೂರೀ. ಮಕ್ಕಳಿಗೆ ತಾಯಿಯೇ ಮೊದಲ ಗುರು. ಮಕ್ಕಳನ್ನು ಇಂಗ್ಲಿಷ್ ಮೀಡಿಯಂಗೆ ಅಡ್ಮಿಟ್ ಮಾಡಬೇಕೆಂಬ ಮಾತೆಯರ ಮನಃಸ್ಥಿತಿ ಬದಲಾಗಿ ಮನೆಮನೆಯಲ್ಲೂ ಕನ್ನಡಪ್ರೇಮ ಇನ್ನಷ್ಟು ಜಾಗೃತಗೊಳ್ಳಲು ಸಾಧ್ಯವಾಗು
ತ್ತಿತ್ತೇನೋ...’ ಎಂದಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.