ADVERTISEMENT

ಚುರುಮುರಿ: ಕುಕ್ಕರು-ಲಿಕ್ಕರು!

ಬಿ.ಎನ್.ಮಲ್ಲೇಶ್
Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
   

‘ಏನ್ರಲೆ, ಉಗಾದಿ ಎಲ್ಲ ಮುಗೀತ? ಚಂದ್ರದರ್ಶನ ಆತಾ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.

‘ಚಂದ್ರ ನಮ್ ಕಡಿ ಕಾಣ್ಲೇ ಇಲ್ಲಪ, ಈ ಗುಡ್ಡೆ ಮನಿ ಕಡಿ ಸ್ವಲ್ಪ ಕಾಣುಸ್ತಂತೆ’ ತೆಪರೇಸಿ ಹೇಳಿದ.

‘ಈ ಚಂದ್ರನೂ ರಾಜಕೀಯದೋರ ತರ ಆಗೋಗೇತೆ. ಪದೇ ಪದೇ ಪಕ್ಷ ಬದಲಿಸ್ತಾ ಇರುತ್ತೆ, ಬೇಕಾದೋರಿಗಷ್ಟೇ ಕಾಣ್ಸುತ್ತೆ’ ದುಬ್ಬೀರ ನಕ್ಕ.

ADVERTISEMENT

‘ಅಲ್ಲ, ಈ ಹಾಸನ, ಮಂಡ್ಯ ಕಡಿ ಉಗಾದಿಗೆ ಅದೆಂಥದೋ ವರ್ಷದ ತೊಡಕು ಅಂತ ಮಾಡ್ತಾರಂತಪ, ಭರ್ಜರಿ ಬಾಡೂಟನಂತೆ, ಯಾರಾದ್ರೂ ಕರೆದಿದ್ರೆ ಹೋಗಬೋದಿತ್ತು...’ ಗುಡ್ಡೆಗೆ ಆಸೆ.

‘ಥೂ ನಿನ್ನ, ನಮಗೆಲ್ಲ ಗಾಡ್ ಈಸ್ ಗ್ರೇಟ್ ಆದ್ರೆ ಈ ಗುಡ್ಡೆಗೆ ‘ಬಾಡ್ ಈಸ್ ಗ್ರೇಟ್’ ಅಲ್ವೇನೋ?’ ಮಂಜಮ್ಮ ನಕ್ಕಳು.

‘ಇದು ಎಲೆಕ್ಷನ್ ಟೈಮು, ಎಲ್ಲಾದ್ರು ನಾನ್‌ವೆಜ್‌ ‘ಘಂ’ ಅಂದ್ರೆ ಸಾಕು ಪೊಲೀಸ್ರು ಕೇಸ್ ಹಾಕ್ತಾರಂತೆ. ಅವ್ರೂ ತಿನ್ನಲ್ಲ, ತಿನ್ನೋರಿಗೂ ಬಿಡಲ್ಲ’ ತೆಪರೇಸಿಗೆ ಕೋಪ.

‘ಈಗ ಅದೆಲ್ಲ ಬಿಡಲೆ, ಹೆಂಗೈತಿ ರಾಜಕೀಯ? ಯಾರು ಎಷ್ಟು ಗೆಲ್ಲಬೋದು?’ ಕೊಟ್ರೇಶಿ ಕೇಳಿದ.

‘ಈ ರಾಜಕೀಯ ಅನ್ನಾದೇ ತೆಲಿ ಕೆಟ್ ಸಂತಿ, ಯಾರು ಯಾವಾಗ ಎಲ್ಲಿರ್ತಾರೆ ಅನ್ನಾದೇ ಗೊತ್ತಾಗಲ್ಲ. ಜಾಸ್ತಿ ತೆಲಿ ಕೆಡಿಸ್ಕಾಬ್ಯಾಡ, ಮೆಂಟ್ಲ್ ಆಗ್ತೀಯ’ ಗುಡ್ಡೆ ನಕ್ಕ.

‘ಕರೆಕ್ಟ್’ ಎಂದ ದುಬ್ಬೀರ, ‘ಅಲ್ಲೋ ಗುಡ್ಡೆ, ನಿಮ್ ಕಡಿ ಕುಕ್ಕರ್ ಹಂಚಿದಾರಂತೆ? ನಮ್ ಕಡಿ ಲಿಕ್ಕರ್‌ಗೆ ಟೋಕನ್ ಕೊಟ್ಟಿದಾರೆ. ಬಾರ್‌ಗೆ ಹೋಗಿ ಟೋಕನ್ ಕೊಟ್ರೆ ಪಟ್ ಅಂತ ಎಣ್ಣೆ, ಸೈಡ್ಸು ಎಲ್ಲ ಕೊಡ್ತಾರೆ’ ಎಂದ.

‘ಅಲ್ಲ, ಈಗ ಎರಡೂ ಪಕ್ಷದೋರು ಕುಕ್ಕರ್ ಕೊಟ್ರೆ ಯಾರಿಗೆ ವೋಟ್ ಹಾಕೋದು?’ ಕೊಟ್ರೇಶಿ ಕೊಕ್ಕೆ.

‘ಯಾವುದು ಚೆನ್ನಾಗಿ ಸೀಟಿ ಹೊಡೀತತಿ ಅವ್ರಿಗೆ ಹಾಕೋದು’ ತೆಪರೇಸಿ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.