ADVERTISEMENT

ಚುರುಮುರಿ: ಯುಗಾದಿ ವರ್ಷ ಭವಿಷ್ಯ

ಲಿಂಗರಾಜು ಡಿ.ಎಸ್
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
   

ಚಾಂದ್ರಮಾನ ಯುಗಾದಿಯು ಕ್ರೋಧಿ ಸಂವತ್ಸರ ದೊಂದಿಗೆ ಆರಂಭವಾಗಲಿದೆ. ತಂತ್ರಜ್ಞಾನದಲ್ಲಿ ಭಾರತ ಉನ್ನತ ಸ್ಥಾನ ತಲುಪುವ ಸಾಧ್ಯತೆಗಳಿವೆ. ನೆರೆ ದೇಶಗಳು ಎಂದಿನಂತೆ ಭಾರತಕ್ಕೆ ಹೊರೆ ಆಗಲಿವೆ. ಗುರುವು ರಾಜನಾಗಿ ಶನಿಯು ಮಂತ್ರಿಯಾಗಿದ್ದು, ಸಾಮಾನ್ಯ ಜನ ಭಯದಿಂದ ತೆರಿಗೆ ತುಂಬುವರು. ಹಣ ಎಂದಿನಂತೆ ದೇಶದ ಸಿರಿವಂತರ ಕಿಸೆಯನ್ನು ಸೇರಲಿದೆ. ಪಕ್ಷಗಳು ಚುನಾವಣೆಗಾಗಿ ನಿಂದನಾ ಕ್ಷೇತ್ರದಲ್ಲಿ ಬಾಯಿಬಲ ಪ್ರಯೋಗಿಸಲಿವೆ. ಪಕ್ಷದ ಟಿಕೇಟು ಸಿಗದ ನಾಯಕರು ಬೇಸರದಿಂದ ಬಿಂಕಸ್ಥಾಪನೆಯ ವ್ರತ ಕೈಗೊಳ್ಳಲಿದ್ದಾರೆ. ದೇಶದ ವಿಪಕ್ಷಗಳ ನಾಯಕರಲ್ಲಿ ಬಂಧನದ ಭೀತಿಯಿಂದ ನಿದ್ರಾನಾಶ.

ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಗದಲ್ಲಿ ಆರ್ಥಿಕ ತೊಂದರೆಯು. ರಾಜ್ಯದಲ್ಲಿ ಅಧಿಕಾರ ಲುಪ್ತವಾಗಿ ಚಡಪಡಿಸುತ್ತಿರುವ ವಿರೋಧ ಪಕ್ಷಗಳ ಚಡಪಾಯಿಗಳಿಗೆ ಕೂಡಾವಳಿ ಯೋಗ ಇದ್ದು, ಕೆಲಕಾಲ ಸುಖ ಸಂಸಾರವಿರಲಿದೆ. ಕೃಷಿ ಮಂತ್ರಿಯಾಗುವ ಹಿಗ್ಗರಣೆಯಲ್ಲಿ ಮಣ್ಣಿನ ಮಕ್ಕಳ ಕಣ್ಣೀರು ಸ್ಫೋಟ. ರಾಜಕಾರಣಿಗಳಿಗೆ, ಬಂಡವಾಳಶಾಹಿಗಳಿಗೆ ಕಾಸಿನ ಆಸೆಯಲ್ಲಿ ಅಹೋರಾತ್ರಿ ನಿದ್ರೆಯಿಲ್ಲದೆ ನಾಯಿಕೆಮ್ಮಲು ಕಾಡಲಿದೆ. ಆದರೂ ಇವೆರಡು ರಾಶಿಗಳಿಗೆ ನಿರಂತರ ಧನಾಗಮದ ರಾಜಯೋಗದಿಂದ ಆಸ್ತಿ ಮೌಲ್ಯ ನೂರಾರು ಪಟ್ಟು ಏರಿಕೆ. ಈ ವರ್ಗಕ್ಕೆ ಐ.ಟಿ., ಇ.ಡಿ. ಭಯ ನಾಸ್ತಿ!

ಜನಸಾಮಾನ್ಯರಿಗೆ ಆಯ-2, ವ್ಯಯ-14. ಧನಕ್ಷಯ. ಅಕ್ಕಿಯ ಮೇಲೆ ಆಸೆಯಿಂದ ದುಡಿಯುವ ವರ್ಗಕ್ಕೆ ಕೆಲಸದ ಮೇಲೆ ಪ್ರೀತಿ ಇಲ್ಲವಾಗಲಿದೆ. ರಾಜಕೀಯ ಹುಯಿಲುದೊರೆಗಳ ಕುತಂತ್ರಜ್ಞಾನದಿಂದ ಜನರಲ್ಲಿ ಅಸಹನೆ, ಅತೃಪ್ತಿ, ಕರ್ಮಸಂಕಟಗಳು ಹೆಚ್ಚಲಿವೆ. ಜಲಕ್ಷಾಮವು ನೀರು ಉದ್ಯೋಗಿಗಳಿಗೆ ಶುಭ ಫಲ ನೀಡಲಿದೆ. ಬೀರು-ಬ್ರಾಂದಿಯ ಬಳಕೆ ಹೆಚ್ಚಿ ಜನ ಗುಂಡುಬಡಕರಾಗುವರು. ಎಣ್ಣೆ ದಾನದಿಂದ ಪರಸ್ಪರ ಸ್ನೇಹ ಹೆಚ್ಚಲಿದೆ. ಚುನಾವಣೆ ನಂತರ ಶನಿ ಪ್ರಭಾವದಿಂದ ಇಂಧನ, ಗ್ಯಾಸ್, ವಿದ್ಯುತ್, ತರಕಾರಿ, ದಿನಸಿ ದರಗಳು ತುಟ್ಟಿಯಾಗಲಿವೆ. ಪುರುಷರ ಆರ್‌ಸಿಬಿ ತಂಡದಲ್ಲಿ ಆಡುವವರು ಒಕ್ಕಾಲಾದರೆ ದುರದೃಷ್ಟ ಮುಕ್ಕಾಲು ಆಗಿರಲಿದೆ. ಮಹಿಳಾ ಕ್ರಿಕೆಟ್ ತಂಡದಿಂದ ಉತ್ತಮ ಫಲ ನಿರೀಕ್ಷಿಸಬಹುದು. ಸರ್ವಂ ಶುಷ್ಕೋಪಚಾರ ಲಭ್ಯತೇ!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.