‘ತೆನೆ ಪಕ್ಷದೋರು ‘ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ’ ಅಭಿಯಾನ ಶುರು ಮಾಡ್ಕಂಡವ್ರಲ್ಲಪ್ಪ’ ಎಂದ ಗುದ್ಲಿಂಗ ಹರಟೆಕಟ್ಟೇಲಿ.
‘ರಾಜಕೀಯದೋರೇ ಅಂಗೆ. ಈಗ ‘ಸಾಕಪ್ಪಾ ಸಾಕು ಸರ್ಕಾರ’ ಅಂತಾರೆ. ಅಧಿಕಾರ ಬೇಕಾದಾಗ ‘ಬೇಕಪ್ಪಾ ಬೇಕು ಸಹಕಾರ’ ಅಂತಾರೆ. ಬೇಕೂಪರಾಗೋದು ನಾವೇ’ ಎಂದ ಮಾಲಿಂಗ.
‘ಈಗ ಕಮಲ-ತೆನೆ ಸಂಬಂಧನೂ ಅಂಗೈ ಆಗೈತೆ. ಎಲೆಕ್ಷನ್ ಟೈಮಲ್ಲಿ ಬೇಕಪ್ಪಾ ಬೇಕು ಅಂದ್ರು ಇಬ್ರೂ. ಈಗ ಇಬ್ರಿಗೂ ಸಾಕಪ್ಪಾ ಸಾಕು ಸಹವಾಸ ಅನ್ನೋ ಹಂಗಾಗದೆ!’
‘ಅದಕ್ಕೇ ಅವರದ್ದು ಜನಾಕ್ರೋಶದ ಗುನ್ನ, ಇವರದ್ದು ಸಾಕಪ್ಪಾ ಸಾಕು ಅಭಿಯಾನ’.
‘ಪಕ್ಷ ಪಕ್ಷದ ವಿರುದ್ಧ ಮಾತ್ರ ಅಲ್ಲ, ಒಳಗೊಳಗೂ ಸಾಕಪ್ಪಾ ಸಾಕು ಅಂತ ಸೀಟ್ಮೇಲೆ ಹಾಕಿದ್ದ ಟವಲ್ ಕೊಡವಿಕೊಳ್ಳೋದು ಇರುತ್ತೆ’.
‘ಅಂಗಂತೀಯಾ?’
‘ಹ್ಞೂಂ ಮತ್ತೆ? ಕಮಲದ ಒಂದು ಬಣ, ಸಾಕಪ್ಪಾ ಸಾಕು ಡೆಲ್ಲಿ ಸವಾಸ ಅಂತ ತೆಪ್ಪಗಾಗದೆ. ಇನ್ನೊಂದು ಬಣ, ಸಾಕಪ್ಪಾ ಸಾಕು ಕೇಸ್ ಮೇಲೆ ಕೇಸು ಅಂತ ಪರದಾಡ್ತಿದೆ! ತೆನೆ ಪಕ್ಷದಲ್ಲೂ ಅಧಿಕಾರನೂ ಇಲ್ಲ, ಅನುದಾನನೂ ಇಲ್ಲ, ಸಾಕಪ್ಪಾ ಸಾಕು ಅಂತಿರೋರು ಮಸ್ತಾಗವ್ರಂತೆ. ಇನ್ನು ಕೈ ಪಾಳಯದಲ್ಲಿ ಕೇಳೋ ಹಾಗೇ ಇಲ್ಲ. ಎಲ್ಲಾ ತರದ ತಾರಾತಿಗಡಿ ಮಾಡಿ ಹೈಕಮಾಂಡ್ ‘ನೋ ಗಡಿಬಿಡಿ, ವೈಟ್ ಮಾಡಿ’ ಅಂತ ಫರ್ಮಾನ್ ಹೊರಡಿಸಿದ್ಮೇಲೆ, ಸಾಕಪ್ಪಾ ಸಾಕು ಅಂತ ಎಲ್ಲಾ ಟೋಪಿ ಕೊಡವಿಕೊಂಡು ಬಂದಿದಾರಂತೆ’.
‘ರಾಜಕೀಯನೇ ಅಂಗೆ! ಕಾಲ ಕಾಲಕ್ಕೆ ಸ‘ಕಪ್ಪ’-ಕಾಣಿಕೆ ಸಿಗಲಿಲ್ಲ ಅಂದ್ರೆ ಸಾಕಪ್ಪಾ ಸಾಕು ಅಂತ ಶುರುವಾಗುತ್ತೆ’.
‘ಜನಕ್ಕೂ ಅಷ್ಟೇ, ಈ ರಾಜಕೀಯದವರ ಅವತಾರಗಳನ್ನ ನೋಡಿ, ಸಾಕಪ್ಪಾ ಸಾಕು ಅನಿಸಿಬಿಟ್ಟಿದೆ. ಸಾಕಪ್ಪಾ ಸಾಕು ನಿಮ್ಮ ನಾಟಕ, ಮುಷ್ಕರ, ಬೇಕಪ್ಪಾ ಬೇಕು ನಮಗೆ ಪರಿಹಾರ ಅನ್ನೋ ಸ್ಥಿತಿ ತಲುಪಿದಾರೆ’.
‘ನಿಜ ಬಿಡು, ರಾಜಕೀಯದೋರು ಸಾಕಪ್ಪಾ ಸಾಕು ಅಂತ ಹೇಳ್ಕೊಂಡೇ ಜನರಿಗೆ ದಿನಕ್ಕೊಂದು ಶಾಕ್ ಕೊಡ್ತಿದಾರೆ. ಅವರಿಗೆ ಸಾಕಪ್ಪಾ ಸಾಕು, ಜನರಿಗೆ ಶಾಕಪ್ಪಾ ಶಾಕು!’ ಎಂದ ಪರ್ಮೇಶಿ.
ಎಲ್ಲಾ ಹೌದ್ಹೌದು ಎನ್ನುತ್ತಾ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.