ADVERTISEMENT

ಚುರುಮುರಿ: ನಾನೇ ಸಿಎಂ!

ಬಿ.ಎನ್.ಮಲ್ಲೇಶ್
Published 13 ಮಾರ್ಚ್ 2025, 23:30 IST
Last Updated 13 ಮಾರ್ಚ್ 2025, 23:30 IST
   

‘ಅಲ್ಲ, ಮದುವೆ ಆದ ಕೂಡ್ಲೆ ಮಕ್ಕಳನ್ನ ಹೆರಿ ಅಂದ್ರೆ ಹೆಂಗೆ? ಮ್ಯಾಜಿಕ್ ಮಾಡಾಕಾಗುತ್ತಾ?’ ಪೇಪರಲ್ಲಿ ತಮಿಳುನಾಡು ಡಿಸಿಎಂ ಕರೆ ಕೊಟ್ಟ ಸುದ್ದಿ ಓದಿ ಗುಡ್ಡೆ ಆಶ್ಚರ್ಯ ವ್ಯಕ್ತಪಡಿಸಿದ.

‘ಇದು ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಕಾಲ ಕಣ್ರಲೆ, ಕಾಯಾಕಾಗಲ್ಲ, ಎಲ್ಲ ಅರ್ಜೆಂಟಾಗಿ ಆಗ್ಬೇಕು’ ದುಬ್ಬೀರ ನಕ್ಕ.

‘ಕರೆಕ್ಟ್, ಎಲ್ಲ ಅರ್ಜೆಂಟೇ... ನಮ್ ಡಿಸಿಎಂ ಡಿ.ಕೆ. ಸಾಹೇಬ್ರು ಕಾಂಗ್ರೆಸ್ ಅಧ್ಯಕ್ಷರಾಗಿ ಮೇ ತಿಂಗಳಿಗೆ ಐದು ವರ್ಷಾಗ್ತತಂತೆ. ಆದ್ರೂ ಈಗ್ಲೇ ಎಲ್ಲರ್‍ನೂ ಕರೆದು ಪಾರ್ಟಿ ಕೊಟ್ರಂತೆ’.

ADVERTISEMENT

‘ಅಲ್ಲ, ಅವ್ರು ಮುಂದೆ ಸಿಎಂ ಆಗ್ತೀನಿ ಅಂತಾನೂ ಈಗ್ಲೇ ಯಾಕೆ ಒಂದು ಪಾರ್ಟಿ ಕೊಡ್ಬಾರ್ದು?’ ಕೊಟ್ರೇಶಿ ಕೊಕ್ಕೆ.

‘ಕೊಡಬೋದಿತ್ತೇನಪ, ಆದ್ರೆ ನಮ್ ಸಿದ್ರಾಮಣ್ಣ ಸಾಹೇಬ್ರು ಈಗ್ಲೂ ನಾನೇ ಸಿಎಂ, ಮುಂದೂ ನಾನೇ ಸಿಎಂ ಅಂದಿರೋದು ಎಲ್ಲೋ ಯಡವಟ್ಟಾದಂಗೆ ಕಾಣುಸ್ತತಿ’.

‘ಸಿದ್ರಾಮಣ್ಣ ಮುಂದೂ ಸಿಎಂ ಆಗೋದು ನಿಜಾನಾ ಅಂತ ಆರ್ಟಿಫಿಶಿಯಲ್ ಇಂಟೆಲಿಜನ್ಸ್‌ಗೆ ಕೇಳಿದ್ರೆ ಹೆಂಗೆ?’

‘ಲೇಯ್, ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಅಂದ್ರೆ ಗಿಳಿಶಾಸ್ತ್ರ ಅನ್ಕಂಡ್ಯಾ? ಅಥ್ವ ವಿದೇಶದಿಂದ ಚಿನ್ನ ತಂದೋರ ಬಾಯಿ ಬಿಡ್ಸೋದೆಂಗೆ, ಯತ್ನಾಳ್, ರೇಣುಕಾಚಾರ್ಯ ಅಂಥೋರ ಬಾಯಿ ಮುಚ್ಸೋದು ಹೆಂಗೆ ಇದ್ನೆಲ್ಲ ಹೇಳುತ್ತೆ ಅನ್ಕಂಡ್ಯಾ?’ ದುಬ್ಬೀರಂಗೆ ಸಿಟ್ಟು ಬಂತು.

‘ಹೇಳಲ್ಲ ಅಂತೀಯ? ಹೋಗ್ಲಿ ಬಿಡಪ್ಪ, ಬೇರೆ ಏನ್ ಸುದ್ದಿ?’

‘ಬೇರೇನಾ? ‘ಕುಕ್ಕೆಕಕೈ’ ಎಂದ ಗುಡ್ಡೆ.

‘ಏನದು? ಕಾಗುಣಿತಾನ?’

‘ಅಲ್ಲ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಕತ್ರಿನಾ ಕೈಫ್ ಅಂತ’.

‘ಓ... ಹಂಗಾದ್ರೆ ಅದೇ ಥರ ನಂದೂ ಒಂದು, ಮಾಮೋಮಯಾ’.

‘ಏನು ಹಂಗಂದ್ರೆ?’

‘ಮಾರಿಷಸ್‌ಗೆ ಮೋದಿ, ಮಣಿಪುರಕ್ಕೆ ಯಾವಾಗ ಅಂತ’.

‘ನೀನು ಕರೆದಾಗ’ ಎಂದಳು ಮಂಜಮ್ಮ. ಎಲ್ಲರೂ ಹೋ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.