ADVERTISEMENT

ಚುರುಮುರಿ: ಕ್ಲ್ಯಾರಿಟಿ ಸಿಗ್ತಿಲ್ಲ!

ಗುರು ಪಿ.ಎಸ್‌
Published 16 ನವೆಂಬರ್ 2021, 19:45 IST
Last Updated 16 ನವೆಂಬರ್ 2021, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಕ್ಲ್ಯಾರಿಟಿ ಸಿಗ್ತಿಲ್ಲ ಸಾರ್, ಕ್ಲ್ಯಾರಿಟಿ ಸಿಗ್ತಿಲ್ಲ...’
ಕೈ ಕೈ ಹಿಸುಕಿಕೊಳ್ಳುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ ಮುದ್ದಣ್ಣ.

‘ಹೀಗ್ಯಾಕೆ ಒದ್ದಾಡ್ತಿದಿಯಾ ಮುದ್ದಣ್ಣ, ಬಿಟ್‌ಕಾಯಿನ್ ಹಗರಣದಲ್ಲಿ ನಿನ್ನ ಹೆಸರೇನಾದರೂ ಐತಾ...’ ಕಾಲೆಳೆದ ವಿಜಿ.

‘ಬಿಟ್‌ಕಾಯಿನ್ ಬಿಟ್‌ಹಾಕು ಅಂತಾ ಪಿಎಂ ಸಾಹೇಬ್ರೆ ಹೇಳಿದ್ಮೇಲೆ ಅದ್ರ ಬಗ್ಗೆ ಯಾಕ್ ತಲೆ ಕೆಡಿಸಿಕೊಳ್ಳಲಿ ಸಾರ್... ಆದ್ರೆ, ನಮಗೆ ಇಂಡಿಪೆಂಡೆನ್ಸ್ ಸಿಕ್ಕಿದ್ದು 1947ರಲ್ಲಾ 2014ರಲ್ಲಾ ಅನ್ನೋ ಬಗ್ಗೆ ಕ್ಲ್ಯಾರಿಟಿ ಸಿಗ್ತಿಲ್ಲ ಸಾರ್...’ ತಲೆ ಕೆರೆದುಕೊಂಡ ಮುದ್ದಣ್ಣ.

ADVERTISEMENT

‘ಕಂಗಾಲ್’ ಥರಾ ನೀನೂ ಮಾತಾಡಿದ್ರೆ ಯಾರೂ ಅವಾರ್ಡ್ ಕೊಡಲ್ಲ ಮುದ್ದಣ್ಣ
ನಿಂಗೆ, ಬೇರೆಯವ್ರ ಕಾಪಿ ಮಾಡಬೇಡ’
ಎಂದು ನಕ್ಕ ವಿಜಿ, ‘ನಿಂಗೆ ಯಾವುದೇ
ವಿಷಯದ ಬಗ್ಗೆ ಕ್ಲ್ಯಾರಿಟಿ ಬೇಕಿದ್ರೆ ಮೈಸೂರ್ ಪಿಎಂಗೆ ಕೇಳು, ಅವರು ಕೊಡ್ತಾರೆ...’ ಎಂದು ಅಮೂಲ್ಯ ಸಲಹೆ ಕೊಟ್ಟ.

‘ಸ್ವಾತಂತ್ರ್ಯದ ವರ್ಷ ಪತ್ತೆ ಮಾಡಿಕೊಡಿ ಅಂದ್ರೆ, ಅವರು ಲಿಂಗಪತ್ತೆ ಮಾಡೋಕೆ ಹೊರಟುಬಿಡ್ತಾರೆ ಸಾರ್, ಅವ್ರ ಸಾವಾಸ ಬೇಡ...’ ಎರಡು ಹೆಜ್ಜೆ ಹಿಂದಕ್ಕೆ ಹೋದ ಮುದ್ದಣ್ಣ.

‘ಹೋಗ್ಲಿ ಬಿಡಪ್ಪ, ಟೆನ್ಷನ್ ಮಾಡ್ಕೊಬೇಡ.. ಸ್ವಾತಂತ್ರ್ಯದ ಚಿಂತೆ ಬಿಡು...‌ ನಾನೇ ನಿನಗೆ
ಕುರಿ ರಕ್ತದ ಫ್ರೈ, ಚಿಕನ್ ಬಿರಿಯಾನಿ ಕೊಡಿಸ್ತೀನಿ ಬಾ, ಪಾರ್ಟಿ ಮಾಡಣ...’

‘ಅಯ್ಯಯ್ಯಯ್ಯಯ್ಯೋ, ಏನ್ ಸಾರ್ ನೀವೂ ಹೀಗೆ ಓಪನ್ ಆಗಿ ನಾನ್‌ವೆಜ್ ಬಗ್ಗೆ ಮಾತಾಡ್ತೀರಾ...! ಶಾಂತಂ ಪಾಪಂ, ಶಾಂತಂ ಪಾಪಂ...’ ಕೆನ್ನೆ ಕೆನ್ನೆ ಬಡ್ಕೊಂಡ ಮುದ್ದಣ್ಣ.

‘ಮುದ್ದಣ್ಣ, ಈಗ ನನಗೆ ಕ್ಲ್ಯಾರಿಟಿ ಸಿಕ್ತು... ನಿನಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿದ್ದು 2014ರ ನಂತರವೇ ಬಿಡು’ ಉತ್ತರಿಸಿದ ವಿಜಿ.

‘ಅದ್ಹೆಂಗೆ ಸಾರ್...’

‘ಕಾಮನ್‌ಸೆನ್ಸ್ ಎಂಬ ಭವಬಂಧನದಿಂದ ನೀನು ಸ್ವತಂತ್ರನಾಗಿದ್ದೀಯಲ್ಲ...!’

‘ಹ್ಞಾಂ...!?’

‘ಹ್ಞೂಂ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.