ADVERTISEMENT

ಚುರುಮುರಿ: ಕರುಣೆ ಇಲ್ಲದ ಜನ!

ಗುರು ಪಿ.ಎಸ್‌
Published 3 ಮೇ 2022, 19:31 IST
Last Updated 3 ಮೇ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಕರ್ನಾಟಕ ರಾಜ್ಯ ಪೊಲೀಸ್ ಆದ ನಾನು ಸಾರ್ವಜನಿಕ ಹಕ್ಕುಗಳನ್ನು ರಕ್ಷಿಸಲು ಪ್ರತಿಜ್ಞಾಬದ್ಧನಾಗಿದ್ದೇನೆ. ಎಲ್ಲರಿಗೂ ವಿಳಂಬವಿಲ್ಲದೆ ನ್ಯಾಯ ದೊರಕುವಂತೆ ಮಾಡಲು ಇತರ ಎಲ್ಲ ಇಲಾಖೆಗಳೊಡನೆ ಸಹಕರಿಸುತ್ತೇನೆ. ರಾಜಕೀಯ ವ್ಯತ್ಯಾಸಗಳನ್ನು ಎಣಿಸದೆ ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ. ಪೊಲೀಸ್ ಇಲಾಖೆಯ ಕೆಲಸದಲ್ಲಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುತ್ತೇನೆ...’

ಕೊರಳುಬ್ಬಿಸಿಕೊಂಡು, ಕಣ್ತುಂಬಿಕೊಂಡು, ಅಳುತ್ತಾ ಪೊಲೀಸರ ಧ್ಯೇಯೋದ್ದೇಶಗಳನ್ನು ಬಾಯಿಪಾಠ ಮಾಡ್ತಿದ್ದ ಮುದ್ದಣ್ಣ.

‘ಮಾಡೋದೆಲ್ಲ ಮಾಡಿ ಈಗ ಅತ್ತರೆ ಏನ್ ಪ್ರಯೋಜನ...’ ಬೈದ ವಿಜಿ‌.

ADVERTISEMENT

‘ಏನ್ ಮಾಡಿದೀನಿ ಸರ್, ಅಂಥದ್ದೇನ್ ಮಾಡಿದೀನಿ ನಾನು...?! ಪೊಲೀಸ್ ಆಗೋಕೂ ಮುಂಚೆನೇ ಅದರ ಧ್ಯೇಯೋದ್ದೇಶಗಳನ್ನೆಲ್ಲ ಪಾಲಿಸಿದ್ದೇ ತಪ್ಪಾ? ನನ್ನ 20ಕ್ಕೂ ಹೆಚ್ಚು ಫ್ರೆಂಡ್ಸ್‌ಗೆ ಎಕ್ಸಾಮ್ ಬರೆಯೋಕೆ ಎಲ್ಲ ‘ಸಹಕಾರ’ ನೀಡಿ ಅವರ ಹಕ್ಕುಗಳನ್ನು ರಕ್ಷಿಸಿದ್ದೇನೆ. ಅವರು ಸಾರ್ವಜನಿಕರಲ್ಲವೇ? ನಾವು ಆಯ್ಕೆಯಾಗೋದ್ರಲ್ಲಿ ಯಾವುದೇ ರೀತಿಯ ವಿಳಂಬ ಆಗಬಾರದು ಅನ್ನೋ ಕಾರಣಕ್ಕೆ, ಎಜುಕೇಷನ್ ಡಿಪಾರ್ಟ್‌ಮೆಂಟ್‌ನ ಮೇಷ್ಟ್ರು, ಹೆಡ್ ಮಾಸ್ಟರುಗಳ ಹೆಲ್ಪ್ ತಗೊಂಡು ಎಕ್ಸಾಮ್ ಬರೆದಿದ್ದೀನಿ. ಯಾವುದೇ ರಾಜಕೀಯ ಪಕ್ಷದ ವ್ಯತ್ಯಾಸವನ್ನೂ ಎಣಿಸದೆ ಎಲ್ಲ ಪಾರ್ಟಿ ಲೀಡರ್‌ಗಳ ಸಹಾಯವನ್ನೂ ಪಡೆದಿದ್ದೀನಿ...’ ಬಿಕ್ಕಳಿಸುತ್ತಲೇ ಹೇಳ್ದ ಮುದ್ದಣ್ಣ.

‘ಆಧುನಿಕ ವಿಧಾನ ಏನು ಅನುಸರಿಸಿದೀಯ?’

‘ಬ್ಲೂಟೂತ್ ಬಳಸಿಲ್ವ ಸಾರ್!’

‘ಆದರೂ... ಪ್ರಾಮಾಣಿಕವಾಗಿ ಓದಿದೋರಿಗೆ ಅನ್ಯಾಯ ಮಾಡಿದಂಗಲ್ವ’ ಸಿಟ್ಟಲ್ಲೇ ಕೇಳ್ದ ವಿಜಿ.

‘ಸರ್, ಎಲ್ಲ ಜನರಂತೆ ನೀವೂ ಕರುಣೆ ಇಲ್ಲದವ್ರ ಥರ ಮಾತಾಡ್ಬೇಡಿ. ಪೋಸ್ಟ್‌ಗಳು ಇರೋದು 545 ಸರ್. ಆದ್ರೆ ನಾವು 25 ಜನ ಮಾತ್ರ ಹೀಗ್ ಮಾಡಿರೋದು’.

‘ಇದೂ ಅನ್ಯಾಯ ಅಲ್ವೇನೋ...’

‘ಕಾಮನ್‌ಸೆನ್ಸ್ ಇಲ್ವ ಸರ್ ನಿಮಗೆ? 545 ಪೋಸ್ಟ್‌ಗೆ 40 ಪರ್ಸೆಂಟ್ ಅಂದ್ರೆ ಕನಿಷ್ಠ 218 ಕ್ಯಾಂಡಿಡೇಟ್‌ಗಳಾದರೂ ನಮ್ಮಂಥವರಿರಬೇಕಿತ್ತಲ್ವ ಸರ್...’ ಅಳು ಜೋರಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.