ADVERTISEMENT

ಚುರುಮುರಿ | ಕೊಲ್ಲುವವರ್ ಯಾರು?

ಸುಮಂಗಲಾ
Published 12 ಜುಲೈ 2020, 21:02 IST
Last Updated 12 ಜುಲೈ 2020, 21:02 IST
   

ಸ್ವರ್ಗದಲ್ಲಿ ದೇವಾನುದೇವತೆಗಳೆಲ್ಲ ‘ಕೊರೊನಾ ನಿನ್ನ ಸೃಷ್ಟಿ, ಹಿಂಗಾಗಿ ನೀನೇ ಉಸ್ತುವಾರಿ ಮಾಡಪ್ಪ’ ಎಂದು ಎಲ್ಲವನ್ನೂ ಬ್ರಹ್ಮನ ತಲೆಗೇ ಕಟ್ಟಿದ್ದರು. ಸಮಸ್ತ ಭೂಮಂಡಲದ ಯಾವ್ಯಾವುದೋ ಮೂಲೆಗಳಲ್ಲಿ ಮರಣಿಸಿದ ಕೊರೊನಾ ಪೀಡಿತರಲ್ಲಿ, ಸ್ವರ್ಗಾರೋಹಣ ಪಟ್ಟಿಯಲ್ಲಿದ್ದವರು ಆ ಎಲ್ಲ ರಕ್ಷಣಾ ಕವಚಗಳೊಂದಿಗೇ ಸ್ವರ್ಗಕ್ಕೇರಿದ್ದರು. ಇಲ್ಲಿ ಆ ಕವಚಗಳನ್ನು ತೆಗೆದು ದೇಹ ಮತ್ತು ಆತ್ಮಕ್ಕೊಂದು ಗತಿ ಕಾಣಿಸುವಷ್ಟರಲ್ಲಿ ಬ್ರಹ್ಮನ ತಂಡಕ್ಕೆ ತಲೆ ಚಿಟ್ಟುಹಿಡಿದಿತ್ತು.

ಹೀಗಿರಲಾಗಿ ಒಂದು ದಿನ ಬ್ರಹ್ಮದೇವರು ಮೇಲ್ವಿಚಾರಣೆ ಮುಗಿಸಿ, ತನ್ನ ಅರಮನೆಯತ್ತ ಹೊರಟಿರಲಾಗಿ, ಸ್ವರ್ಗದ ಬಾಗಿಲೊಳು ಯಾರೋ ಕರೆದಂತೆ ಅನ್ನಿಸಿತು. ಕಿಟಕಿಯಲ್ಲಿ ಇಣುಕಿದ. ಕೊರೊನಾ ಬೇರೆಬೇರೆ ಅವತಾರದ ತನ್ನೆಲ್ಲ ಚಿಳ್ಳೆಪಿಳ್ಳೆಗಳನ್ನು ಕಟ್ಟಿಕೊಂಡು ಬಾಗಿಲು ಬಡಿಯುತ್ತಿತ್ತು. ತಾನೇ ಸೃಷ್ಟಿಸಿದ ಸೂಕ್ಷ್ಮಾಣುವೊಂದು ಹಿಂಗೆ ಜೀವಂತ ನಿಂತಿದ್ದು ಕಂಡು ಬ್ರಹ್ಮನಿಗೆ ಹೃದಯವೇ ಬಾಯಿಗೆ ಬಂದಿತು. - ‘ಅಲ್ಲಯ್ಯಾ, ಸುಮ್ನೆ ಬಾವಲಿವಳಗೆ ಜೋತಾಡಿಕೊಂಡಿರು ಅಂತ ಕಳಿಸಿದರೆ, ಈಪರಿ ಮಾರಣ ಹೋಮ ಮಾಡುವುದೇ?’

ಬ್ರಹ್ಮನಿಗೆ ಬೈಯಲಿಕ್ಕೂ ಕೊರೊನಾ ಬಿಡಲಿಲ್ಲ. ‘ದೇವ್ರೇ... ಬೇಕಿದ್ರೆ ನನ್ನ ಮತ್ತೆ ಬಾವಲಿಯ ದೇಹಕ್ಕೇ ವಾಪಸು ಕಳಿಸು. ಆದ್ರೆ ಮೊದ್ಲು ಕರುನಾಡಿನ ಟಿ.ವಿ ಆ್ಯಂಕರ‍್ರುಗಳಿಗೆ ಏನಾದ್ರೂ ಮಾಡು. ಅವರ ಅರಚಾಟ, ಆ ವಿಚಿತ್ರ ಮ್ಯಾನರಿಸಂಗಳು, ರಣಸಂಗೀತ... ಇನ್ನು ಆ ಹೆಡ್‌ಲೈನುಗಳೋ- ಕರೋನಾ ರಣಕೇಕೆ, ಕೊರೊನಾ ಮರಣಮೃದಂಗ, ಚೈನೀಸ್ ವೈರಸ್ ಡೆಡ್ಲೀ ಸೀಕ್ರೆಟ್, ಹೆಮ್ಮಾರಿ ಕೊರೊನಾ ಆರ್ಭಟ... ಕಿವಿಗೆ ಕಾದಸೀಸೆ ರಪರಪನೆ ಸುರಿದಂತೆ. ಕರುನಾಡಿನ ಪ್ರಜೆಗಳು ಅದಾವ ಪಾಪ ಮಾಡಿದ್ದಾರೋ. ನಿಜವಾಗಿ ಕೊಲ್ಲುವವರ್ ಯಾರು ಅಂತ ಸ್ಯಾಂಪಲ್ ನೋಡು... ಇವರೂ ನಿನ್ನದೇ ಸೃಷ್ಟಿ ’ ಎಂದು ವಿಡಿಯೊ ತೋರಿಸಿತು. ಟಿ.ವಿ ನಿರೂಪಕನೊಬ್ಬ ಕಿವಿ ತಮಟೆ ಹರಿಯುವಂತೆ ಕಿರುಚುತ್ತಿದ್ದ, ‘ಎಲ್ಲಿದ್ದಾನೆ ಆ ಬ್ರಹ್ಮ... ಕಿಲ್ಲರ್ ಕೊರೊನಾವನ್ನು ಸೃಷ್ಟಿ ಮಾಡುವಾಗ ಬುದ್ಧಿ ಎಲ್ಲಿಟ್ಟಿದ್ದನಂತೆ... ವೈರಸ್ ಭೂಮಿಗೆ ಬಿಟ್ಟು ಜನರ ಪ್ರಾಣದ ಜೊತೆ ಸರಸಾಟ...’ ವಿಡಿಯೊ ಆರಂಭದ ಆರ್ಭಟಕ್ಕೇ ತತ್ತರಿಸಿದ ಬ್ರಹ್ಮ ಮೂರ್ಛೆ ಹೋದ!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.