ADVERTISEMENT

ಚುರುಮುರಿ | ಆ ಆನೆ ‘ಇ- ಆನೆ’

ನಾರಾಯಣ ರಾಯಚೂರ್
Published 22 ಫೆಬ್ರುವರಿ 2023, 22:15 IST
Last Updated 22 ಫೆಬ್ರುವರಿ 2023, 22:15 IST
   

‘ಆನಿ ಬಂತೊಂದಾನಿ, ಇದ್ಯಾವೂರ ಆನಿ? ಇಲ್ಲೀಗ್ಯಾಕ ಬಂತು...’

‘ಏನು? ಮೊಮ್ಮಗನ ಜೊತೆ ಆನೆ-ಆಟ?’

‘ಏನ್ಮಾಡೋದು? ನಿಮ್ಮ ಹಾಗೆ ಇಪ್ಪತ್ನಾಕ್ ಗಂಟೆ ವಾಟ್ಸ್‌ಆ್ಯಪ್‌, ಟಿ.ವಿ., ಪೇಪರು ಅಂತ ಇರೋಕಾಗತ್ತ’ ಮಡದಿ ಕೆಣಕಿದಳು.

ADVERTISEMENT

‘ಹೇಳೋಕೆ ಮರೆತೆ, ಪೇಪರಲ್ಲಿ ಆನೆ ನ್ಯೂಸು ಎರಡ್ಮೂರಿವೆ. ಮೊನ್ನೆ ರಾತ್ರಿ ಒಂದು ಹಳ್ಳೀಲಿ ಆನೆ, ಪಡಿತರ ಅಂಗಡಿ ಶಟರ್ಸ್ ಮುರಿದು ಒಳನುಗ್ಗಿ, 50 ಮೂಟೆ ಅಕ್ಕಿ ಇದ್ದ ಗೋದಾಮಿನಲ್ಲಿ 55 ಕೆ.ಜಿ. ಅಕ್ಕಿ ಮಾತ್ರ ತಿಂದು ಹೋಗಿದೆಯಂತೆ!’

‘ಜಾಣ ಆನೆ! ಅದೂ ಪಡಿತರ ನಿಯಮ ಪಾಲಿಸಿ, ಒಂದಾನೆಗೆ ಇಷ್ಟು ಕೆ.ಜಿ. ಅಂತ, ಅಷ್ಟೇ ತಿಂದು ಹೋಗಿದೆ!’

‘ಓಹೋ ಹಾಗಂತೀಯ, ಕೇರಳದ ದೇವಸ್ಥಾನವೊಂದರಲ್ಲಿ ಇ- ಆನೆ ಅಂದರೆ ಎಲೆಕ್ಟ್ರಾನಿಕ್ ಆನೆಯನ್ನ ಆಚರಣೆಗಳಿಗೆ ಬಳಸಿಕೊಳ್ಳಲಾಗ್ತಾಯಿದೆಯಂತೆ, 11 ಅಡಿ ಎತ್ತರದ ಈ ಗಜ ಎಲ್ಲರ ಗಮನ ಸೆಳೀತಿದೆಯಂತೆ ಕಣೆ!’

‘ಏನ್ರೀ ಇದು, ಗಂಟೆ, ನಗಾರಿ ಬಾರಿಸೋಕೆ ಮಷೀನ್ ಬಂದಿತ್ತು. ಈಗ ಜೀವಂತ ಆನೆ ಜಾಗಕ್ಕೆ ‘ಯಂತ್ರ ಆನೆ’ನಾ? ಕೃಷ್ಣಾ!’

‘ಇನ್ನೂ ಕೇಳೇ, ಸಾಮಾನ್ಯ ಅಲ್ಲ ಈ ಇ-ಆನೆ, ಸೊಂಡಿಲಿಂದ ನೀರು ಸಿಂಪಡಣೆನೂ ಮಾಡತ್ತಂತೆ, ಕಾಲಿಗೆ ಚಕ್ರಗಳನ್ನು ಜೋಡಿಸಿರೋ ದ್ರಿಂದ ನಾಲ್ಕು ಜನರನ್ನ ಕೂರಿಸಿಕೊಂಡು ಸವಾರಿನೂ ಮಾಡ್ಸತ್ತಂತೆ ಕಣೆ. ಕೆಲವೇ ದಿನಗಳಲ್ಲಿ ರಿಮೋಟ್ ಮೂಲಕ ಇದನ್ನು ನಿಯಂತ್ರಿಸೊ ಸಿದ್ಧತೆನೂ ನಡೆದಿದೆಯಂತೆ’.

‘ಕೃಷ್ಣ ಕೃಷ್ಣಾ! ಏನು ಕಾಲ ಬಂತಪ್ಪ? ಚಿನ್ನದ ಗೋಪುರ, ವಜ್ರದ ಹಾರ ಅಂತೆಲ್ಲ ದುಡ್ಡು ಸುರೀತಾರೆ, ಒಂದು ಪ್ರಾಣೀನ ಸಾಕೋಕಾಗಲ್ವೆ? ರಿಮೋಟ್ ಅಂತೆ, ರೊಬೋಟ್ ಅಂತೆ’.

‘ಜೀವಂತ ಆನೆಯು ಉತ್ಸವಗಳಲ್ಲಿ ಜನಕ್ಕೆ ಹೆದರಿ, ಮದವೇರಿ ಗಲಾಟೆ ಮಾಡೋ ಅನಾಹುತ ತಪ್ಪಿಸೋಕೆ...’

‘ಯಂತ್ರದ ಆನೆಯಿಂದ ಅನಾಹುತ ಆಗಲ್ವೋ?! ಹಾಗೇ ಬಿಟ್ಟರೆ ಮೂಲ
ವಿಗ್ರಹಾನೇ ಆಚೆಯಿಟ್ಟು ‘ಇ-ವಿಗ್ರಹ’ನೇ
ಕೂಡಿಸಿಬಿಡ್ತಾರೇನೊ!’

‘ಆವಾಗ ದೇವರ ಗತಿ?’

‘ದೇವರೇ ಗತಿ’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.