ADVERTISEMENT

ಚುರುಮುರಿ | ಪೂರಕ ಗ್ಯಾರಂಟಿ!

ತುರುವೇಕೆರೆ ಪ್ರಸಾದ್
Published 26 ಮೇ 2023, 23:52 IST
Last Updated 26 ಮೇ 2023, 23:52 IST
   

ಯಾರ್‍ಯಾರು ಯಾವ್ಯಾವ ಗ್ಯಾರಂಟಿ ದಕ್ಕುಸ್ಕೊಬಹುದು ಅಂತ ಹರಟೆಕಟ್ಟೇಲಿ ಲೆಕ್ಕಾಚಾರ ಹಾಕ್ತಿದ್ರು. ‘ನೀವೇನೇ ಹೇಳ್ರಲೇ, ಈ ಗ್ಯಾರಂಟಿಗಳ ಜೊತೆ ಪೂರಕ ಗ್ಯಾರಂಟಿ ಕೊಡ್ಲೇಬೇಕು’ ಅಂದ ಮಾಲಿಂಗ.

‘ಪೂರಕ ಗ್ಯಾರಂಟಿನಾ? ಅಂಗಂದ್ರೆ ಏನೋ?’ ಹುಬ್ಬೇರಿಸಿದ ಗುದ್ಲಿಂಗ.

‘ಈ ಪೂರಕ ಬಜೆಟ್ಟು, ಪೂರಕ ಅನುದಾನ ಇರಕಿಲ್ವಾ? ಅಂಗೇಯ ಇದು ಪೂರಕ ಗ್ಯಾರಂಟಿ. ಈಗ ಪುಕ್ಕಟೆ ಕರೆಂಟು ಗ್ಯಾರಂಟಿ. ಅಂಗೇಯ ಕರೆಂಟ್ ಕೈ ಎತ್ಕಂಡಾಗ ಬ್ಯಾಟರಿ, ಯುಪಿಎಸ್ಸು, ಸೀಮೆಎಣ್ಣೆ ಕೊಡ್ಬೇಕು. ಅಂಗೇ ಒಂದೀಟು ಬುಡ್ಡಿ, ಬಲ್ಬುಗಳು ಜೊತೆಗೆ ಮಿಕ್ಸಿ, ಗ್ರೈಂಡರ್ಗೆ ಬಡ್ಡಿ ಇಲ್ದೆ ಸಾಲ, ಕಂತು ಎಲ್ಲಾನೂ ಸರ್ಕಾರ ಕೊಡುಸ್ಬೇಕು. ಇದು ಪೂರಕ ಗ್ಯಾರಂಟಿ’.

ADVERTISEMENT

‘ಅಂಗಾರೆ ಹೊಸ ನಿರುದ್ಯೋಗಿಗಳಿಗೆ ಅಷ್ಟೇ ಅಲ್ಲ, ಹಳೇ ನಿರುದ್ಯೋಗಿಗಳಿಗೂ ಭತ್ಯೆ, 60 ವರ್ಷ ಪೂರಾ ನಿರುದ್ಯೋಗಿಯಾಗಿಯೇ ಕಳ್ದಿದ್ರೆ ನಿರುದ್ಯೋಗ ಮಾಸಾಶನ ಕೊಡ್ಬೇಕು ಅನ್ನು’.

‘ಊ ಮತ್ತೆ, ಫ್ರೀಬಿ ಜೊತೆಗೆ ಒಂದೀಟು ಡೇಟಾ ಬಿಟ್ಟಿ ಕೊಟ್ರೆ ನಿರುದ್ಯೋಗಿಗಳು ಕೆಲಸನೂ ಕೇಳಕಿಲ್ಲ, ರೀಲ್ ನೋಡ್ಕಂಡು ಸರ್ಕಾರಗಳು ಏನೇ ರೈಲ್ ಬಿಟ್ರೂ ಮಾತಾಡದೆ ಮೊಬೈಲಲ್ಲೇ ಮುಳುಗಿ ಓಗಿರ್ತಾರೆ’ ಎಂದ ಮಾಲಿಂಗ.

‘ಅಂದ್‌ಮ್ಯಾಗೆ ಅಕ್ಕಿ ಜೊತೆಗೆ ಪುಳಿಯೋಗರೆ, ಚಿತ್ರಾನ್ನದ ಮಿಕ್ಸು, ಚಟ್ನಿನೂ ಪೂರಕ ಗ್ಯಾರಂಟಿ ಅಂತ ಕೊಡ್ಬೇಕಲ್ವಾ?’

‘ಊ, ಕೊಡ್ಲೇಬೇಕು, ಈಗ ಮನೆ ಯಜಮಾನ್ತಿಗೆ ಎರಡು ಸಾವಿರ ಕೊಡ್ತೀವಿ ಅಂತ ಯೋಳವ್ರೆ. ನಮ್ ದುಡ್ನೂ ಹೆಂಡ್ತಿನೇ ಕಿತ್ಕಂಡಿರ್ತಾಳೆ. ಅವಳಿಗೇ ಮತ್ತೆ ದುಡ್ ಕೊಡೋದು ಶಾನೆ ಅನ್ಯಾಯ. ಸರ್ಕಾರ ‘ಬಡಪಾಯಿ ಯಜಮಾನ’ ಅಥವಾ ‘ದರಿದ್ರ ನಾರಾಯಣ’ ಸ್ಕೀಂ ಮಾಡಿ, ಮನೆ ಯಜಮಾನನ ಅಕೌಂಟಿಗೇ ಸೀದಾ ದುಡ್ ಆಕೋ ಅಂಗಾಗ್ಬೇಕು’.

‘ನಮ್ಗೆ ಬಾರ್ ಪಾಸ್ ಕೊಟ್ಬುಡ್ಳಿ. ಯಾವ ಗ್ಯಾರಂಟಿ, ಪೂರಕ ಗ್ಯಾರಂಟಿನೂ ಕೇಳ್ದೆ ಮೂರೊತ್ತೂ ನೈಂಟಿ ಒಡ್ಕಂಡ್ ಜೈ ಅಂದ್ಕಂಡು ಇದ್‍ಬಿಡ್ತೀವಿ’.

‘ಹೌದೌದು, ಇದಕ್ಕೆ ನಾವೂ ಜೈ’ ಅಂತ ಎಲ್ಲಾ ಕೈ ಎತ್ತಿ ಹಲ್ ಕಿರಿದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.