ADVERTISEMENT

ಚುರುಮುರಿ: ತೆಳು ಮೊಸರು, ಕಹಿತುಪ್ಪ

ಕೆ.ವಿ.ರಾಜಲಕ್ಷ್ಮಿ
Published 29 ಜೂನ್ 2022, 19:21 IST
Last Updated 29 ಜೂನ್ 2022, 19:21 IST
1
1   

‘ಮೊಸರು ಯಾಕೋ ತೆಳ್ಳಗಿದೆ’ ಗೊಣಗಿಕೊಂಡೇ ತುತ್ತೆತ್ತಿದೆ.

‘ಯಾಕೆ? ವಿಷಯ ಗೊತ್ತಿಲ್ವ? ಗಂಟೆಗಟ್ಲೆ ಪೇಪರ್ ಓದಿದ್ದೂ ಓದಿದ್ದೇ ನ್ಯೂಸ್ ಕೇಳಿದ್ದೂ ಕೇಳಿದ್ದೇ! ಜಿಎಸ್‌ಟಿ ಆವರಣಕ್ಕೆ ಮೊಸರು, ಜೇನುತುಪ್ಪ, ಪನ್ನೀರು ಎಲ್ಲ ಸೇರಿಕೊಂಡಿವೆ. ಇನ್ಮೇಲೆ ಇವೆಲ್ಲ ತುಟ್ಟಿ’ ನನ್ನವಳು ಉರಿದುಬಿದ್ದಳು.

‘ರಸಾಯನದಲ್ಲಿ ಜೇನುತುಪ್ಪ ಇರೋಲ್ಲ’ ಪುಟ್ಟಿ ಕಿಸಕ್ಕನೆ ನಕ್ಕಳು.

ADVERTISEMENT

‘ನಗ್ಬೇಡ, ವಿದ್ಯುತ್ ಬೆಲೆಯೇರಿಕೆಯ ಶಾಕ್ ಬೇರೆ, ಓದೋದೇನಿದ್ರೂ ಆದಷ್ಟೂ ಬೆಳಕಿದ್ದಾಗ್ಲೇ ಮುಗಿಸ್ಕೊ’ ನಾನು ನನ್ನವಳ ಪರ ನಿಂತೆ.

‘ನೀವೂ ಅಷ್ಟೆ, ಟಿ.ವಿ. ಓಡ್ತಿರುತ್ತೆ ನೀವು ತೂಕಡಿಸ್ತಾ ಇರ್ತೀರಿ. ಎಲ್ಲ ಸಹವಾಸ ದೋಷ, ನಿಮ್ಮ ಗೆಳೆಯನ ಚಾಳಿ ನಿಮಗೂ...’ ಪರೋಕ್ಷವಾಗಿ ಕಂಠಿಗೂ ಅರ್ಚನೆ.

‘ಅದೆಲ್ಲ ಇರ್‍ಲಿ, ಇನ್ಮುಂದೆ ಏಕಬಳಕೆ ಪ್ಲಾಸ್ಟಿಕ್ ನಿಷೇಧ. ಪರಿಸರ ಕಾಳಜಿಯ ದಿಸೆಯಲ್ಲಿ ಒಳ್ಳೇದೇ ಆಯಿತು’ ಅತ್ತೆ ಸುದ್ದಿ ಕೊಟ್ಟರು.

‘ಎಳನೀರು, ಜ್ಯೂಸು ಇವನ್ನೆಲ್ಲ ಸ್ಟ್ರಾನಲ್ಲಿ ಸುರ್ ಅಂತ ಹೀರ್ತಿದ್ವಿ, ಇಯರ್ ಬಡ್ ಹೇಗಿರುತ್ತೋ?’ ಪುಟ್ಟಿಯ ಚಿಂತೆ.

‘ಎಳನೀರನ್ನ ಲಕ್ಷಣವಾಗಿ ಲೋಟಕ್ಕೆ ಬಗ್ಗಿಸಿಕೊಂಡು ಕುಡಿದರಾಗೋಲ್ವೆ? ನಾವೆಲ್ಲ ಕಿವಿ ಗುಗ್ಗೇನ ಸೇಫ್ಟಿ ಪಿನ್ನೋ ಇಲ್ಲ ಸಣ್ಣ ಹೇರ್ ಪಿನ್ನಲ್ಲೋ ತೆಗೆದು ಸ್ವಚ್ಛ ಮಾಡ್ಕೊತಿದ್ವಿ, ಏನಾಗಿದೆ ನಮಗೆ?’ ಅತ್ತೆ ಗದರಿದರು.

ಅಷ್ಟರಲ್ಲಿ ಕಂಠಿ ಕುಂಟಿಕೊಂಡೇ ಬಂದು ಈಸಿ ಚೇರಿನಲ್ಲಿ ಕಷ್ಟಪಟ್ಟು ಕುಳಿತ.

‘ಏನಾಯ್ತು? ಬಾಸ್ ಜೊತೆ ಪ್ರವಾಸ ಗಿವಾಸ ಹೋಗಿದ್ಯಾ?’

‘ಬಾಸ್ ಮನೆಗೆ ಹೋಗುವಾಗ, ಹೊಸದಾಗಿ ಡಾಂಬರು ಹಾಕಿ ಮಿರಮಿರ ಮಿಂಚ್ತಿದ್ದ ರಸ್ತೆಯಲ್ಲಿ ಗುಂಡಿ ಕಾಣದೆ ಎಡವಿಬಿದ್ದೆ, ಸ್ವಲ್ಪ ಮೂಗೇಟು’.

‘ಮತ್ತೆ ಮೂಗಿಗೆ ಪ್ಲಾಸ್ಟರ್ ಹಾಕಿಲ್ಲ’ ಪುಟ್ಟಿಯ ಕೀಟಲೆ!

‘ಹೊರಗೆ ಥಳುಕು ಒಳಗೆ ಹುಳುಕು ಅನ್ನೋದು ಅದಕ್ಕೇ, ಹೋಗ್ಲಿಬಿಡು, ಇಷ್ಟರಲ್ಲೇ ಆಯಿತು ಅಂತ ಸಮಾಧಾನ ಪಟ್ಕೋಬೇಕು’ ಎಂದೆ.

ಕಂಠಿ ಆಗಲೇ ನಿದ್ದೆಗೆ ಜಾರಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.