ADVERTISEMENT

ಚುರುಮುರಿ: ‘ದರ ಮಹಾಲಕ್ಷ್ಮೀ’ ವ್ರತ!

ಚಂದ್ರಕಾಂತ ವಡ್ಡು
Published 7 ಆಗಸ್ಟ್ 2025, 20:45 IST
Last Updated 7 ಆಗಸ್ಟ್ 2025, 20:45 IST
ಚುರುಮುರಿ
ಚುರುಮುರಿ   

ಮಡಿಚಿದ ದಿನಪತ್ರಿಕೆ ಹಿಡಿದು ಬೈಟು ಬಳಗಕ್ಕೆ ಜೊತೆಯಾದ ತಿಂಗಳೇಶ.

‘ಪೇಪರಿನಲ್ಲಿ ಇವತ್ತಿನ ವಿಶೇಷ ಏನಪ್ಪಾ…’ ಎನ್ನುತ್ತಾ ಕೈಚಾಚಿದ ಬದ್ರಿ.

‘ನಮ್ಮ ಸಮುದಾಯದಲ್ಲಿ ಯಾರಾದರೂ ‘ಕೊಂಡು ಓದುಗ’ ಅಂತ ಇದ್ರೆ… ಅದು ನಮ್ಮೆಲ್ಲರ ಹೆಮ್ಮೆಯ ಬದ್ರಿಮಾಮಾ ಮಾತ್ರ…’ ಎಂದು ಘಂಟಾಘೋಷವಾಗಿ ಕೂಗಿದ ಪ್ರಕಾಶಿ, ಚಪ್ಪಾಳೆಗಾಗಿ ಕಾದ.

ADVERTISEMENT

‘ಖರೀದಿಸಿಯೋ ಕಡ ಪಡೆದೋ… ಒಟ್ಟಿನಲ್ಲಿ ‘ಕೊಂಡು’ ಓದಿದರೆ ಸಾಕು ಎಂದು ಹೇಳಲು ನಾನು ಇಷ್ಟಪಡುತ್ತೇನೆ…’ ರಾಜಣ್ಣ ಬಾಯಿ ಹಾಕಿದ. ಎಲ್ಲರ ಉದ್ದೇಶ ಒಂದೇ; ಬದ್ರಿಯನ್ನು ‘ಉದ್ರಿ ಓದುಗ’ ಎಂದು ನಿರೂಪಿಸುವುದು.

‘ಶ್ರಾವಣ ಮಾಸದಲ್ಲಿ ಅದೇನಪ್ಪಾ ಮಹಾ ಸುದ್ದಿಗಳು ಇರುತ್ತವೆ? ಅವೇ– ಹಬ್ಬದ ಸಡಗರ, ಹೂವು– ಹಣ್ಣು ಖರೀದಿಗೆ ಮುಗಿಬಿದ್ದ ಭಕ್ತಸಾಗರ, ದರ ಏರಿದರೂ ಕುಗ್ಗದ ಸಂಭ್ರಮ... ಇವನ್ನು ಓದಲು ಪತ್ರಿಕೆ ಕೊಳ್ಳಬೇಕೆ? ನಾನಷ್ಟು ಮೂರ್ಖನಲ್ಲ’ ಬದ್ರಿಯ ಸಮರ್ಥನೆ ಕೇಳಿ ತಿಂಗಳೇಶ ಹೆಗಲು ಮುಟ್ಟಿಕೊಂಡ.

‘ಸ್ಥಳದಲ್ಲಿ ಎಷ್ಟು ಗುಂಡಿ ಅಗೆದರು, ಎಷ್ಟು ಮೂಳೆ ತೆಗೆದರು ಎಂಬ ಕುತೂಹಲವೂ ನಿನಗಿಲ್ಲವೇ?’

‘ಹೋಗಲಿ, ಮೋದಿ ಮಾಮಾ ಮಾತು ಕೇಳಲಿಲ್ಲ ಅಂತ ಟ್ರಂಪ್ ಅಂಕಲ್ ಸುಂಕ ಏರಿಸಿದ್ದಾದರೂ ಬಿಸಿ ಸುದ್ದಿಯಲ್ಲವೇ?’

‘ಅಮೆರಿಕ ಅಧ್ಯಕ್ಷ ಒಳ್ಳೇ ಕೆಲಸ ಮಾಡಿದ್ದಾರೆ. ಈಗಲಾದರೂ ಭಾರತದ ಪ್ರಧಾನಿಗೆ ನಾವು ಅನುಭವಿಸು ತ್ತಿರುವ ಜಿಎಸ್‌ಟಿ ಭಾರದ ಅರಿವಾಗಲಿ’ ಬದ್ರಿ ಅಸಲಿ ಸುದ್ದಿಗೆ ಬಂದ.

‘ಇದು ಎ.ಐ ಯುಗ. ಹೊಸದಾಗಿ ‘ದರ ಮಹಾಲಕ್ಷ್ಮೀ’ ವ್ರತ ಆರಂಭಿಸಿದರೆ ಜಿಎಸ್‌ಟಿ ಭಾರ ಇಳಿಯಬಹುದೇನೋ...’

‘ಇದಕ್ಕೆ ಪ್ರತಿಯಾಗಿ ಸರ್ಕಾರ ‘ಕರ ಮಹಾಲಕ್ಷ್ಮೀ’ ಪೂಜೆ ನಡೆಸಿದರೆ ಕರದಾತರಿಗೆ ಇನ್ನೂ ಕಷ್ಟ’.

‘ನಾವು ‘ಸುಂಕಷ್ಟಹರಣ’ ಗಣಪನನ್ನು ಕೂಡಿಸೋಣ ಬಿಡಿ’ ತಿಂಗಳೇಶ ತೀರ್ಪು ನೀಡಿದ! 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.