ADVERTISEMENT

ಚುರುಮುರಿ | ಬದುಕೇ ಹೊಂಡಾಗುಂಡಿ!

ಸುಮಂಗಲಾ
Published 18 ಡಿಸೆಂಬರ್ 2022, 20:30 IST
Last Updated 18 ಡಿಸೆಂಬರ್ 2022, 20:30 IST
Churumuri==19122022
Churumuri==19122022   

‘ಏ ನೋಡಿಲ್ಲಿ, 2024ರ ಅಂತ್ಯದ ಹೊತ್ತಿಗೆ ನಮ್ಮ ರಸ್ತೆಗಳನ್ನ ಅಮೆರಿಕದ ರಸ್ತೆಗಳ ಗುಣಮಟ್ಟಕ್ಕೆ ಸಮ ಮಾಡತೀವಿ ಅಂತ ನಮ್ ಗಡ್ಕರಿ ಮಾಮಾ ಹೇಳ್ಯಾನ’ ಬೆಕ್ಕಣ್ಣ ಪೇಪರು ಹಿಡಿದು ಭಯಂಕರ ಖುಷಿಯಲ್ಲಿ ವದರಿತು.

‘ಸದ್ಯ, ಹೇಮಾಮಾಲಿನಿ ಕೆನ್ನೆ ಹಂಗೆ ಮಾಡ್ತೀನಿ ಅಂತೆಲ್ಲ ಹೇಳಿಲ್ಲವಲ್ಲ. ಅದ್ಸರಿ, ಅಮೆರಿಕದ ರಸ್ತೆಗಳ ಗುಣಮಟ್ಟಕ್ಕೆ ಸಮ ಅಂದ್ರೇನರ್ಥ? ಅಲ್ಲೂ ಹೊಂಡಾಗುಂಡಿ ಇರತಾವು, ನಮಗಿಂತ ಸ್ವಲ್ಪ ಕಡಿಮೆ ಇರಬೌದು ಅಷ್ಟೇ. ಹಿಂಗಾಗಿ ಹೊಂಡಾಗುಂಡಿ ಕಡಿಮೆ ಮಾಡತೀವಿ ಅಂದಿರಬೇಕಲೇ’ ಎಂದೆ.

‘ಮೊಸರನ್ನದಾಗೆ ಕಲ್ಲು ಹುಡುಕಿದಂಗೆ ಮಾತಾಡಬ್ಯಾಡ. ಗಡ್ಕರಿ ಮಾಮಾ ಭರವಸೆ ಕೊಟ್ಟಾನಂದ್ರ ಆಗೇ ಆಗತೈತಿ’ ಬೆಕ್ಕಣ್ಣ ವಾದಿಸಿತು.

ADVERTISEMENT

‘ನಮ್ಮ ರಸ್ತೆಗಳು ಅಂತ ಹೇಳಿದ್ದರಾಗೆ ಕರುನಾಡಿನ, ಬೆಂಗಳೂರಿನ ರಸ್ತೆಗಳನ್ನು ಹೊರತುಪಡಿಸಿ ಅಂದಿರಬೇಕು. ನೋಡಿಲ್ಲಿ, ನಮ್ಮ ಬಿಬಿಎಂಪಿ ಆಯುಕ್ತರು ಹೇಳ್ಯಾರೆ... ರಸ್ತೆ ಗುಂಡಿಗಳು ನಿರಂತರ, ಜಗತ್ತಿನಾಗೆ ಯಾವ ನಗರದ ರಸ್ತೆವಳಗ ಹೊಂಡಾಗುಂಡಿಗಳು ಇಲ್ಲ ಅಂತ ನನಗ ತೋರಿಸಿ ಅಂತ’.

‘ಸರಿಯಾಗೇ ಹೇಳ್ಯಾರ ಅವರು... ಸಾವಿಲ್ಲದ ಮನೆ ಯಾವುದೈತಿ? ಹಂಗೇ ಹೊಂಡಗುಂಡಿ ಗಳಿಲ್ಲದ ನಗರ ಈ ಜಗತ್ತು ಮಾತ್ರವಲ್ಲ, ಮ್ಯಾಗೆ ಇಂದ್ರಲೋಕದೊಳಗೂ ಇರಲಿಕ್ಕಿಲ್ಲ. ರಸ್ತೆಗಳಿರೋವರೆಗೆ ಹೊಂಡಾಗುಂಡಿಗಳು ಇರತಾವು, ಅವು ಇರೋವರೆಗೆ ರಿಪೇರಿ ಹೆಸರಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಸುಖಿನೋಭವಂತು!’ ಬೆಕ್ಕಣ್ಣ ಹೆಹ್ಹೆ ಗುಟ್ಟಿತು.

‘ಹಂಗೆ ನಿರಂತರವಾಗಿರೋ ಸಮಸ್ಯೆಗಳು ಭಾಳ ಅದಾವಲೇ. ಗಡಿ ತಂಟೆ ನಿರಂತರ...’ ಎಂದು ಪೇಪರಿನಲ್ಲಿ ‘ಇಪ್ಪತ್ತೈದು ವರ್ಷಗಳ ಹಿಂದೆ’ ಕಾಲಂನಲ್ಲಿ ಬಂದಿದ್ದ ಕರ್ನಾಟಕ-ಮಹಾರಾಷ್ಟ್ರದ ಗಡಿ ತಂಟೆ ಸುದ್ದಿ ತೋರಿಸಿದೆ.

‘25 ವರ್ಷಗಳ ನಂತರ ಅಂತ ಪೇಪರಿ ನವರು ಭವಿಷ್ಯದ ಸುದ್ದಿ ಬರೆದರೂ ಹೊಂಡಾ ಗುಂಡಿ ರಸ್ತೆ, ಗಡಿ ತಂಟೆ, ಬೆಲೆಯೇರಿಕೆ, ಭ್ರಷ್ಟಾಚಾರ... ಇಂತಹ ನಿರಂತರ ಸಮಸ್ಯೆ ಗಳು ಇದ್ದೇ ಇರತಾವೇಳು’ ಎಂದು ನನ್ನನ್ನು ಸಮಾಧಾನಿಸಿದ ಬೆಕ್ಕಣ್ಣ ‘ಒಟ್ಟಾರೆ ಶ್ರೀಸಾಮಾನ್ಯರ ಬದುಕೇ ಹೊಂಡಾಗುಂಡಿ’ ಎಂದು ಷರಾ ಬರೆಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.