ADVERTISEMENT

ಚುರುಮುರಿ: ಟ್ರಾಫಿಕ್ ಡೈವೋರ್ಸ್!

ತುರುವೇಕೆರೆ ಪ್ರಸಾದ್
Published 9 ಫೆಬ್ರುವರಿ 2022, 20:45 IST
Last Updated 9 ಫೆಬ್ರುವರಿ 2022, 20:45 IST
Churumuri==10-02-2022
Churumuri==10-02-2022   

ಪರ್ಮೇಶಿ ಫೋನ್ ಮಾಡ್ದ: ‘ಎಲ್ಲಿದ್ದೀಯೋ?’

‘ತುಮಕೂರು ರೋಡ್ ಫ್ಲೈಓವರ್ ಕೆಳಗೆ ತಗಲಾಕ್ಕಂಡು ಅರ್ಧ ಗಂಟೆಯಾಯ್ತು’ ಅಂದೆ.

‘ಬೇಗ ಮನೆಗೆ ಹೋಗು, ಇಲ್ಲಾಂದ್ರೆ ನಿನ್ ಹೆಂಡ್ತಿ ಡೈವೋರ್ಸ್ ಕೊಟ್ಬಿಟ್ಟಾಳು’.

ADVERTISEMENT

‘ಟ್ರಾಫಿಕ್ ಜಾಮ್‍ಗೂ ಡೈವೋರ್ಸ್‌ಗೂ ಏನೋ ಸಂಬಂಧ?’

‘ಸಂಬಂಧ ಇದೆ ಕಣೋ... ಮಹಾರಾಷ್ಟ್ರ ಮಾಜಿ ಸೀಎಂ ದೇವೇಂದ್ರ ಫಡಣವೀಸ್ ಅವರ ಹೆಂಡ್ತಿ ಅಮೃತಾ ಫಡಣವೀಸ್‌ ಮುಂಬೈನಲ್ಲಿ ಶೇ 3ರಷ್ಟು ಡೈವೋರ್ಸ್‌ಗಳು ಟ್ರಾಫಿಕ್ ಜಾಮಿಂದ ಆಗುತ್ತವೆ ಅಂತ ಸಂಶೋಧನೆ ಮಾಡಿದಾರೆ’.

‘ಅಯ್ಯೋ ದೇವರೇ, ಟ್ರಾಫಿಕ್ ಜಾಮಲ್ಲಿ ಕ್ರಶ್ಶು, ಲವ್ವು, ಮದುವೆ, ಕೊನೆಗೆ ಹೆರಿಗೇನೂ ಆಗಿದ್ದು ಕೇಳಿದ್ದೆ. ಆದ್ರೆ ಜಾಮಿಂದ ಡೈವೋರ್ಸ್ ಕೂಡ ಆಗುತ್ತೆ ಅಂತ ಇವತ್ತೇ ಕೇಳಿದ್ದು. ಅಲ್ಲೇ ಹಾಗಾದ್ರೆ ಇನ್ನು ನಮ್ ಬೆಂಗಳೂರಿನ ಜಾಮೆಲ್ಲಾ ಲೆಕ್ಕಕ್ಕೆ ತಗೊಂಡ್ರೆ ಟ್ರಾಫಿಕ್ ಜಾಮ್ ಡೈವೋರ್ಸ್ ಪ್ರಮಾಣ ಶೇ 75 ಆಗ್ಬಹುದು’.

‘ನಿಜ ಕಣೋ, ಈ ಹಂಪ್‍ಗಳು, ಗುಂಡಿ ಗೊಟರು ಎಲ್ಲಾ ದಾಟ್ಕೊಂಡು ಮನೆ ಮುಟ್ಟೋ ಹೊತ್ತಿಗೆ ಗಂಡಾಗುಂಡಿ ಸಂಸಾರದ ಬಂಡಿ ಕಡಾಣಿ ಕಳಚ್ಕಂಡು ಚರಂಡಿಗೆ ಬಿದ್ದೋಗಿರುತ್ತೆ’.

‘ಅದೂ ನಿಜಾನೇ ಇರ್ಬಹುದು ಪರ್ಮೇಶಿ, ಆದ್ರೂ ಹೆಂಡ್ತೀರು ಇಷ್ಟು ಚಿಕ್ಕ ಕಾರಣಕ್ಕೆ ಡೈವೋರ್ಸ್ ಕೊಡ್ತಾರಾ ಅಂತ’.

‘ಇದು ಚಿಕ್ಕ ಕಾರಣನಾ? ಈ ಟ್ರಾಫಿಕ್ ಜಾಮ್ ನೆವ ಹೇಳ್ಕೊಂಡು ಗಂಡಸರು ಹೆಂಡ್ತೀರನ್ನ ಏಮಾರುಸ್ತಿಲ್ವಾ? ಲವ್ವರ್‍ನ ಕೂರಿ
ಸ್ಕೊಂಡು ಜಾಲಿಯಾಗ್ ಓಡಾಡ್ತಿದ್ದೋರೆಲ್ಲಾ ಗಂಟೆಗಟ್ಟಲೆ ಜಾಮಲ್ಲಿ ತಗಲಾಕ್ಕಂಡಿರ್ತಾರೆ. ಇದನ್ ನೋಡಿದ ಯಾರೋ ಹೊಟ್ಟೆ ಉರುಕರು ಹೋಗಿ ಅವ್ರ ಹೆಂಡ್ತೀರ ಕಿವಿ ಕಚ್ಚಿರ್ತಾರೆ. ಡೈವೋರ್ಸ್ ಕೊಡೋಕೆ ಇಷ್ಟು ಸಾಲದಾ?’

‘ಇದೇನು ನಿನ್ ಅನುಭವನಾ?’‌

‘ನಿನ್ನಂಥ ದಡ್ಡರಿಂದ ಪಾಠ ಕಲಿಯೋನು ನಾನು. ಹೌದು, ಯಾರದು ನಿನ್ ಗಾಡೀಲಿ ಹಿಂದೆ ಕೂತಿರೋರು?

‘ಅಯ್ಯೋ ಪಾಪಿ! ಎಲ್ಲಿದ್ದೀಯೋ ನೀನು?’

‘ನಿನ್ ಹಿಂದೇನೇ ಇದೀನಿ’.

ಬಾಂಬ್ ಬಿದ್ದಂತೆ ಬೆಚ್ಚಿದೆ. ಪರ್ಮೇಶಿ ಗಹಗಹಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.