ADVERTISEMENT

ಚುರುಮುರಿ | ಲವ್ ಆ್ಯನಿವರ್ಸರಿ

ಮಣ್ಣೆ ರಾಜು
Published 15 ಫೆಬ್ರುವರಿ 2024, 0:30 IST
Last Updated 15 ಫೆಬ್ರುವರಿ 2024, 0:30 IST
   

‘ತಾತಾ... ಕಾಮನಬಿಲ್ಲು ಬರೆಯಿರಿ ಅಂದರೆ ರಾಮನ ಬಿಲ್ಲು ಬರೆದಿದ್ದೀರಿ!’ ಮೊಮ್ಮಗಳು ಸಿಟ್ಟಾದಳು.

‘ರಾಮನ ಬಿಲ್ಲಿಗೆ ಏಳು ಬಣ್ಣ ಹಚ್ಚಿದರೆ ಕಾಮನಬಿಲ್ಲಾಗುತ್ತದೆ...’ ಅಂದ್ರು ಶಂಕ್ರಿ ತಾತ.

‘ನಿಮಗೆ ಡ್ರಾಯಿಂಗ್ ಗೊತ್ತಿಲ್ಲ’ ಎಂದು ಬೇಸರಗೊಂಡು ಮೊಮ್ಮಗಳು ಪುಸ್ತಕ ಎತ್ತಿಕೊಂಡು ರೂಮಿಗೆ ಹೋದಳು.

ADVERTISEMENT

‘ನಲವತ್ತು ವರ್ಷದ ಹಿಂದೆ ವ್ಯಾಲೆಂಟೈನ್ಸ್ ಡೇ ದಿನ ನೀವು ನನಗೆ ಗುಲಾಬಿ ಹೂ ಕೊಟ್ಟು, ಪ್ರಿಯೇ, ನಕ್ಷತ್ರಗಳನ್ನು ಕಿತ್ತುತಂದು ಪೋಣಿಸಿ ಹಾರ ಮಾಡಿ ಹಾಕಲೆ? ಚಂದ್ರನನ್ನು ತಂದು ಮುಡಿಸಲೆ? ಬಣ್ಣದ ಕಾಮನಬಿಲ್ಲನ್ನು ಸೀರೆಯಾಗಿ ಉಡಿಸಲೆ? ಅಂತ ಕವನ ಬರೆದು ಕೊಟ್ಟಿದ್ರಿ, ಈಗ ಕಾಮನಬಿಲ್ಲಿನ ಕಲರ್, ಕ್ರೇಜ್ ಕಮ್ಮಿಯಾಯ್ತೆ?’ ಹಳೆ ಪ್ರೇಮ ಪುರಾಣ ನೆನಪಿಸಿದರು ಸುಮಿ.

‘ಯೌವನದ ಪ್ರೇಮ ಪುಳಕ ಮರೆಯಲು ಸಾಧ್ಯವೇ? ಆಗಿನ ಕಾಮನಬಿಲ್ಲು, ಪ್ರೇಮದ ಗುಲ್ಲು ಈಗಲೂ ಹಾಗೇ ಇವೆ...’ ಗಲ್ಲ ಹಿಡಿದು ಲಲ್ಲೆಗರೆದರು ಶಂಕ್ರಿ.

‘ಪಾರ್ಕ್, ಹೋಟೆಲ್, ಸಿನಿಮಾ
ಥಿಯೇಟರ್‌ಗಳಲ್ಲಿ ಪ್ರೇಮ ಗುಲಾಬಿಯ ಪರಿಮಳ ಹರಡಿದ್ವಿ. ತೊಂಡೆ ತುಟಿ, ಸಂಪಿಗೆ ಮೂಗು, ದ್ರಾಕ್ಷಿ ಕಣ್ಣು, ಕೋಗಿಲೆ ಕಂಠ, ಮೂಗಿಲಿ ಸೊಂಟ ಅಂತೆಲ್ಲಾ ನನ್ನನ್ನು ಹಾಡಿಹೊಗಳ್ತಿದ್ರಿ. ಈಗ ನೀವು ಹೊಗಳುವುದೇ ಇಲ್ಲ...’

‘ಈಗ ನಿನ್ನ ಮುಖ ಸೋರೆಕಾಯಿ, ಸೊಂಟ ಕುಂಬಳಕಾಯಿ ಎಂದು ಸತ್ಯ ಹೇಳಿದರೆ ನಿನಗೆ ಕೋಪ ಬರುತ್ತೆ’ ಎಂದು ಶಂಕ್ರಿ ನಕ್ಕರು.

ಸುಮಿ ನಗದೆ ಸಿಟ್ಟಾದರು.

‘ವ್ಯಾಲೆಂಟೈನ್ಸ್ ಡೇಯಂದು ಲವ್ ಆ್ಯನಿವರ್ಸರಿ ಆಚರಿಸಿಕೊಂಡು, ಸಂಸಾರದ ಲಾಂಗ್ ಜರ್ನಿಯಲ್ಲಿ ಹೂವು, ಲವ್ವು ಬಾಡದಂತೆ ಕಾಪಾಡಿಕೊಳ್ಳೋಣ’ ಎಂದ ಶಂಕ್ರಿ, ಗುಲಾಬಿ ಹೂ ಕೊಟ್ಟು ‘ಐ ಲವ್ ಯೂ...’ ಹೇಳಿ ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.