ADVERTISEMENT

ಚುರುಮುರಿ: ಬೋಲ್‍ಜೀಬ್ರಾ

ಲಿಂಗರಾಜು ಡಿ.ಎಸ್
Published 8 ನವೆಂಬರ್ 2021, 19:31 IST
Last Updated 8 ನವೆಂಬರ್ 2021, 19:31 IST
Churumuri-09-11-2021
Churumuri-09-11-2021   

‘ಸಾ, ಮೋದಿ ಪೆಟ್ರೋಲ್- ಡೀಸೆಲ್ ರೇಟು ಇಳ್ಸಕ್ಕೆ ನಾವೆ ಕಾರಣ ಅಂದವ್ರೆ ಕೈಮರದ ಹುಲಿಯಾ, ಡಿ.ಕೆ?’ ತುರೇಮಣೆಗೆ ಹೇಳಿದೆ.

‘ರಾಜಕೀಯದೋರು ಹಂಗೀಯೆ ಕನೋ! ಒಳ್ಳೆ ಕೆಲಸ ಆಗಿದ್ರೆ ನಮ್ಮ ಅಬ್ಬರ ನೋಡಿ ಹೆದರಿಕ್ಯಂಡು ಆದುದ್ದು ಅಂತ ಜನದ ತಲೆಗೆ ಮದ್ದು ಅರೀತರೆ’ ಅಂತಂದ್ರು.

‘ಅದೆಂಗ್ಸಾ ಬುಡಸೇಳಿ’ ಅಂತಂದೆ.

ADVERTISEMENT

‘ಬೊಡ್ಡಿಹೈದ್ನೆ, ಯಾವನೋ ಪಕ್ಸಾಂತರ ಮಾಡಿದ್ರೆ ಇನ್ನೊಂದು ಪಕ್ಸದೋರು ನಮ್ಮ ಅಂದ, ಚಂದ ನೋಡಿ ಬತ್ತಾವ್ನೆ ಅಂತರೆ. ಇವರ ಸರ್ಕಾರ ಇದ್ದಾಗ ಸುಮ್ಮನಿದ್ದೋರು ಈಗ ಮೇಕೆದಾಟು ಪಾದಯಾತ್ರೆ ಮಾಡ್ಯಾರಂತೆ. ಇದಾನಸಭೆ ಚುನಾವಣೇಲಿ ಆಡಳಿತ ಪಕ್ಸ ಸೋತರೆ ಅದು ಸರ್ಕಾರದ ವಿರುದ್ಧ ಜನರ ಆಕ್ರೋಶ ಅಂತರೆ. ಸೋತ ಪಕ್ಸದೋರು ಅಭ್ಯರ್ಥಿ ಸ್ವಂತ ಶಕ್ತಿ ಮೇಲೆ ಗೆದ್ದವ್ನೆ, ನಮ್ಮ ಅಭ್ಯರ್ಥಿಗೆ ಅಪಪ್ರಚಾರ ಆಯ್ತು ಅನ್ನಲ್ವೇ! ಬಿಜೆಪಿ ಸೋತರೆ ಬೆಲೆ ಇಳಿತದಂತೆ. ಇವರಿದ್ದಾಗ ಈರುಳ್ಳಿ ಬೆಲೆ ಏರಿಕೆಗೆ ಪತರುಗುಟ್ಟೋದ್ರು!’

‘ಅಂದ್ರೆ ಅವರವರೆ ಮಕ್ಕುಕ್ಕತಾವ್ರೆ ಅಂತೀರಾ?’ ಅಂದೆ.‌

‘ಅಲ್ವಾ ಮತ್ತೆ! ಜಪ್ತಿ ಮಾಡಿದ್ದ ಬಿಟ್ ಕಾಯಿನ್ ನಾಪತ್ತೆ ಆಗ್ಯವಂತೆ! ಸಿಲಿಂಡರಿಗೆ ಸಾವಿರ ಮುಟ್ಟಿದ್ದು ಇವರಿಂದ ಅಲ್ವಂತೆ. ಕಾರ್ಯಕಾರಿಣೀಲಿ ಎಲೆಕ್ಸನ್ ಸೋತುದ್ದು ಚರ್ಚೆಯೇ ಆಗಿಲ್ಲವಂತೆ. ಮೋದಿ ಏನು ಕಮ್ಮಿ ಇಲ್ಲ ‘ಅಚ್ಚೆ ದಿನ್ ಆನೆ ವಾಲಾ ಹೈ’ ಅಂತ ಕಿವಿ ಮ್ಯಾಲೆ ಹೂವು ಮಡಗುತ್ಲೇ ಅದೆ. ರಾಜಕೀಯದೋರು ಮೈಲೇಜ್ ತಗಣಕೆ ಬಿಳಿ ಸುಳ್ಳು, ಕರಿ ಸುಳ್ಳುಗಳನ್ನ ನೂರು ನೂರು ಸಾರಿ ಹೇಳಿ ನಿಜ ಮಾಡೋ ಆಲ್ಜೀಬ್ರಾ ಬುಡುಸುತ್ಲೇ ಇರತರೆ ಕನೋ!’ ಅಂದ್ರು.

‘ಅಂದ್ರೆ ನೀನೇಳದು ಪದ, ಸಂಕೇತಗಳನ್ನ ಬಳಸಿಗ್ಯಂಡು ಅಂಕಿ-ಸಂಖ್ಯೆ ಮ್ಯಾಜಿಕ್ ಮಾಡದು ಅಂತೀಯೇನೋ ತುರೇಮಣೆ’ ಯಂಟಪ್ಪಣ್ಣ ಕೇಳಿತು.

‘ಹಂಗಾದ್ರೆ ಬಾಯ್ತುಂಬ ಸುಳ್ಳು ಹಂಚೋ ಕೆಲಸಕೆ ಏನಂದಾರು ಸಾ?’

‘ಇನ್ನೇನಂದರ್‍ಲಾ, ಬೋಲ್‍ಜೀಬ್ರಾ ಅನ್ನಬೋದು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.