ADVERTISEMENT

ಚುರುಮುರಿ: ಗೃಹಲಕ್ಷ್ಮಿ ರಮಣ ಭಾಗ್ಯ!

ಎಸ್.ಬಿ.ರಂಗನಾಥ್
Published 31 ಆಗಸ್ಟ್ 2023, 0:00 IST
Last Updated 31 ಆಗಸ್ಟ್ 2023, 0:00 IST
   

‘ನಿನ್ನೆ ಕಾಣಲಿಲ್ಲ, ಎಲ್ಲಿಗಯ್ಯಾ ಹೋಗಿತ್ತು ಸವಾರಿ?’ ದೋಸ್ತ್‌ನನ್ನು ಗುಂಡಣ್ಣ ಕೇಳಿದ.

‘ಮೈಸೂರಿಗೆ ಹೋಗಿದ್ದೆನಯ್ಯಾ, ಹೆಂಡ್ತಿ ಜೊತೆ’ ಎಂದ ಮಿತ್ರ.

‘ದಸರಾ ಇನ್ನೂ ದೂರ ಇದೆಯಲ್ಲೋ! ಹೆಂಡ್ತಿ ಮೇಲೆ ಯಾವಾಗಲೂ ಕಂಪ್ಲೇಂಟ್ ಹೇಳ್ತಿದ್ದೆ’.

ADVERTISEMENT

‘ಅದು ಕಮಲದ ದಿನಗಳಲ್ಲಿ. ಈಗ ಮೇಡಮ್ ಅವರ ಅಭಯ ಹಸ್ತದ ರಭಸದ ದಿನಗಳಲ್ವೇ, ಮಹಿಳೆಯರಿಗೆ ಭಾರೀ ಜೋಶ್! ನಾವು ಅವರ ಮೇಲೆ ಜೋರು ಮಾಡಿದ್ರೆ, ಶಕ್ತಿ ಯೋಜನೆ ಲಾಭ ಪಡೆದು ಅವ್ರು ಬೇಕಾದ ಕಡೆ ಟ್ರಿಪ್ ಹೋಗಿಬಿಡ್ತಾರೆ’.

‘ಅದ್ಸರಿ, ನಿನ್ನೆ ನೀನು ಮೈಸೂರಿಗೆ ಜಾಯಿಂಟ್ ಟ್ರಿಪ್ ಹೋಗಿದ್ದು ಯಾಕೋ?’

‘ಅಲ್ಲಿ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಇತ್ತಲ್ಲಯ್ಯಾ, ಕಾಂಗ್ರೆಸ್ ಯುವರಾಜರು ಬಂದಿದ್ರು. ನಾಕು ಬಸ್ ಮಾಡಿದ್ರು. ಮನವಿ ಕೊಡೋಕೆ ಹೋಗಿದ್ದೆವು’.

‘ಏನು ಬೇಡಿಕೆ ಇಟ್ಟೆಯೋ ನೀನು?’

‘ಗೃಹಲಕ್ಷ್ಮಿ ರಮಣ ಭಾಗ್ಯ ಮತ್ತು ಪುರುಷ ಶಕ್ತಿ ಭಾಗ್ಯ ಯೋಜನೆ ಪ್ರಾರಂಭಿಸಲು ಸಿದ್ದರಾಮಯ್ಯ-ಡಿಕೆಶಿಗೆ ಹೇಳಿ, ಆಗಿರೋ ಸ್ತ್ರೀ– ಪುರುಷ ತಾರತಮ್ಯ ‌ಸರಿಪಡಿಸೀಂತ ಕೇಳಿದೆ’.

‘ಅಲ್ಲೋ, ಈಗ ಕೊಟ್ಟಿರೋ ಭಾಗ್ಯಗಳಿಂದ್ಲೇ ರಾಜ್ಯ ದಿವಾಳಿಯಾಗುತ್ತೇಂತಿದಾರೆ ನಮೋಜೀ!’

‘ಅವರೂ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನೋ ಹಾಗೆ ಗ್ಯಾಸ್ ಸಿಲಿಂಡರ್‌ಗೆ ಇನ್ನೂರು ರೂಪಾಯಿ ಸಬ್ಸಿಡಿ ಭಾಗ್ಯ ಕೊಟ್ಟರಲ್ಲಾ!’

‘ರಾ.ಗಾಗೆ ನಿನ್ನ ಹೆಂಡತಿ ಯಾವಾಗ, ಏನು ಕೇಳಿದಳೋ?’

‘ಅವರಿಗೆ ರಕ್ಷಾಬಂಧನ ರಾಖಿ ಕಟ್ಟುವಾಗ, ‘ಸೋನಿಯಾ ಮೇಡಂ ತಮಗೆ ಹೆಣ್ಣು ಹುಡುಕುವ ಜವಾಬ್ದಾರಿಯನ್ನು ಹರಿಯಾಣದ ಹೆಣ್ಣುಮಕ್ಕಳಿಗೆ ಕೊಟ್ಟಿರೋದನ್ನ ಬದಲಿಸಿ, ಅದನ್ನು ಕರ್ನಾಟಕದ ಮಹಿಳೆಯರಿಗೆ ವಹಿಸಬೇಕು. ನಿಮ್ಮನ್ನು ವರಿಸಲು ನಮ್ಮಲ್ಲಿ ಹರಿಯಾಣದ ವಧುಗಳಿಗಿಂತ ಇನ್ನೂ ಸುಂದರವಾದ ತರುಣಿಯರು ಇದ್ದಾರೆ ಅಂತ ಹೇಳಿದಳಂತೆ’.

‘ರಾ.ಗಾ ಪ್ರತಿಕ್ರಿಯೆ?’

‘ಫ್ಲೈಯಿಂಗ್ ಕಿಸ್ ಕೊಡದೆ ಸುಮ್ಮನೆ ನಸುನಕ್ಕರಂತೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.