‘ಯಾವಾಗಲೂ ನಮ್ ನಿರ್ಮಲಕ್ಕಂಗೆ ಬೈತಿರತೀ. ಮಂದಿ ಬಗ್ಗೆ ಆಕಿ ಎಷ್ಟು ಕಾಳಜಿ ಮಾಡತಾಳ ಅಂತ ಈಗಾದ್ರೂ ತಿಳಕೋ…’ ಎಂದು ಬೆಕ್ಕಣ್ಣ ಗುರುಗುಟ್ಟಿತು.
‘ಹಂತಾಪರಿ ಕಲ್ಯಾಣ ಕಾರ್ಯಕ್ರಮ ಏನು ಮಾಡ್ಯಾಳಲೇ’ ಎಂದೆ ಅಚ್ಚರಿಯಿಂದ.
‘ಈ ಸಲ ಆದಾಯ ತೆರಿಗೆ ಮಿತಿಯನ್ನ ಹದಿನೈದು ಲಕ್ಷಕ್ಕೆ ಏರಿಸಬೌದು ಅಂತ ಸುದ್ದಿ ಐತಿ. ಮಧ್ಯಮ ವರ್ಗದವರಿಗೆ ಇನ್ನೇನು ಬೇಕು?’ ಬೆಕ್ಕಣ್ಣ ವಾದಿಸಿತು.
‘ಸುದ್ದಿ ಅಲ್ಲ, ಅದಿನ್ನೂ ಗಾಳಿಸುದ್ದಿ’ ಎಂದೆ.
‘ಒಲೆವಳಗೆ ಹೊಗೆಯಾಡಿತು ಅಂದ್ರ ಬೆಂಕಿ ಹತ್ತತೈತಿ. ಗಾಳಿಸುದ್ದಿನೇ ಆಮೇಲೆ ಖರೇಸುದ್ದಿ ಆಗೂದು’ ಬೆಕ್ಕಣ್ಣ ನಕ್ಕಿತು.
‘ಆದಾಯ ತೆರಿಗೆ ಮಿತಿ ಏರಿಸಿದರೆ, ಕಡಿಮೆ ತೆರಿಗೆ ಕೊಟ್ಟು, ಉಳಿಸಿದ ರೊಕ್ಕದಿಂದ ಮಂದಿ ಪಾಪ್‌ಕಾರ್ನ್ ತಿನ್ನತಾರೆ. ಆವಾಗ ಪಾಪ್‌ಕಾರ್ನ್ ಜಿಎಸ್‌ಟಿವಳಗೆ ಆ ರೊಕ್ಕ ವಸೂಲು ಮಾಡಬೌದಂತ ನಿರ್ಮಲಕ್ಕ ಪ್ಲಾನ್ ಮಾಡ್ಯಾರೆ’ ಎಂದೆ.
‘ಬಡವರು ತಿನ್ನೋ ಸಾದಾ ಪಾಪ್‌ಕಾರ್ನಿಗೆ 5% ಜಿಎಸ್‌ಟಿ, ಮಧ್ಯಮವರ್ಗದವರು ತಿನ್ನೋ ಉಪ್ಪು ಮಸಾಲೆ ಹಚ್ಚಿ ಪ್ಯಾಕ್ ಮಾಡಿದ್ದಕ್ಕೆ 12% ಜಿಎಸ್‌ಟಿ, ಮತ್ತೆ ರೊಕ್ಕ ಇದ್ದೋರು ತಿನ್ನೋ ಕ್ಯಾರಮಲ್ ಪಾಪ್‌ಕಾರ್ನಿಗೆ 18% ಜಿಎಸ್‌ಟಿ. ಅಂದ್ರ ಜೇಬಿಗೆ ತಕ್ಕ ಜಿಎಸ್‌ಟಿ’ ಎಂದು ಮರು ವಾದಿಸಿತು.
‘ಒಂದು ದೇಶ, ಎಲ್ಲಾ ಒಂದೇ ಇರಬಕು ಅನ್ನೋರು ತಿನ್ನುವ ಒಂದು ಐಟಮ್ಮಿಗೆ ಮೂರು ಥರದ ಜಿಎಸ್‌ಟಿ ಹಾಕೂದು ಯಾವ ನ್ಯಾಯ?’ ನಾನು ಪ್ರಶ್ನಿಸಿದೆ.
‘ವೈವಿಧ್ಯತೆಯ ದೇಶ ನಮ್ಮದು… ಹಂಗಾಗಿ ವೈವಿಧ್ಯತೆಯ ಜಿಎಸ್‌ಟಿ! ಆದ್ರೂ ವರ್ಷದ ಕೊನೆಗೆ ನಿರ್ಮಲಕ್ಕ ತೆರಿಗೆ ಮಿತಿ ಹೆಚ್ಚಳದ ನೆಮ್ಮದಿಯ ಸುದ್ದಿ ಕೊಟ್ಟಾಳೆ’ ಎಂದು ಮೀಸೆ ತಿರುವಿತು.
‘ಡಾಲರ್ ಎದ್ರು ನಮ್ಮ ರೂಪಾಯಿ ಕುಸಿದು ಪಾತಾಳ ಕಂಡೈತಿ. ಯಾವ ನೆಮ್ಮದಿಯ ಮಾತಾಡ್ತಿ?’
‘ನೀವು ಬಡವರು, ಮಧ್ಯಮವರ್ಗದವರು ಡಾಲರ್ ಕೊಳ್ಳಂಗಿಲ್ಲ! ನಿಮ್ಮ ವ್ಯಾಪಾರ ರೂಪಾಯಿವಳಗೆ ನಡೀತೈತೆ. ನಿಮಗ್ಯಾಕೆ ಚಿಂತೆ’ ಎಂದು ಬೆಕ್ಕಣ್ಣ ಹುಂಬವಾದ ಮುಂದಿಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.