ನಮ್ಮ ವಿಕ್ರಮಾದಿತ್ಯ ಜನಸಾಮಾನ್ಯನ ಹಂಗೆ ಕರ್ತವ್ಯ ಮರೀದೆ ಬೇತಾಳನ್ನ ಹುಡಿಕ್ಕಂದು ವಿಧಾನಸೌಧದ ಮುಂದುಕ್ಕೆ ಬಂದಾಗ, ಸೌಧದಲ್ಲಿ ಹಲಾಲು-ಗುಲಾಲು, ಚಿನ್ನ-ಡ್ರಗ್ಸ್ ದಂಧೆಯ ಗದ್ದಲದ ಧಗೆ ಏರಿತ್ತು.
‘ಓ ಇಲ್ಲಿದ್ದೀಯಾ ರಾಜನ್’ ಅಂತ ಬೇತಾಳ ವಿಕ್ರಮಾದಿತ್ಯನ ಹೆಗಲೇರಿಕ್ಯಂತು. ರಸ್ತೆಗುಂಡಿ ತಪ್ಪಿಸಕ್ಕೆ ವಿಕ್ರಮಾದಿತ್ಯನು ಅತ್ತಿತ್ತ ನೆಗೆಯುತ್ತಿರಲು ‘ಹುಸಾರು ಕಾ ರಾಜರೆ’ ಅಂತ ಕಿಸಗುಟ್ಟಿತು. ಕಬ್ಬನ್‌ಪಾರ್ಕಲ್ಲಿ ಅಂಗನವಾಡಿ ಕಾರ್ಯಕರ್ತೆಯರು ‘ನ್ಯಾಯ ಕೊಡಿ’ ಅಂತ ಕೂಗ್ತಿದ್ದರು. ಫುಟ್‍ಪಾತಿಗೆ ಬೈಕು ಹತ್ತಿಸಿದ ಪೊರ್ಕಿಯೊಬ್ಬ ಬೇತಾಳನಿಗೆ ಲಾಂಗಿನಲ್ಲಿ ಚುಚ್ಚಿ ಹೋದ. ‘ಡ್ರಗ್ಸ್ ಬೇಕಾ?’ ಅಂತ ಒಬ್ಬ ಬಂದಾಗ ವಿಕ್ರಮಾದಿತ್ಯನು ಸೈಲೆಂಟಾಗಿದ್ದ.
‘ರಾಜನೇ ಇದೇನಾ ವಿದ್ಯಾರ್ಥಿಗಳ ವೃತ್ತಿಗೆ ಮಾರ್ಗದರ್ಶನ. ಗಡಿಯಲ್ಲಿ ಶಾಲೆ ಕೇಳೋರೇ ಇಲ್ಲ. ಬಜೆಟ್ಟಲ್ಲಿ ಮೂರು ಲಕ್ಷ ಮನೆ ಕಟ್ಟಿಸ್ತರಂತೆ. ವಿತ್ತೀಯ ಕೊರತೆ ಮಧ್ಯೆ ಕೋಟಿ ಸಾಲ ಮಾಡಿ ಮೂರೂಮುಕ್ಕಾಲು ಲಕ್ಷ ಕೋಟಿಯ ಆಸೆಯನ್ನ ಆರೂವರೆ ಕೋಟಿ ಜನಗಳ ಮೂಗಿಗೆ ಹಚ್ಚಿಬುಟ್ಟದೆ ಸಿದ್ದಣ್ಣ. ಅಭಿವೃದ್ಧಿ, ಅನುದಾನ, ಆರ್ಥಿಕ ಬಲ, ಸಣ್ಣ ವ್ಯಾಪಾರಿಗಳಿಗೆ ಸಾಲ, ಗೌರವಧನ ಹೆಚ್ಚಳಕ್ಕೂ ಗ್ಯಾರಂಟಿ ಐತಾ ಕಾಣ್ನಲ್ಲ. ಇದೊಂತರಾ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಬಜೆಟ್ ಇದ್ದಂಗಿಲ್ವಾ ರಾಜನ್?’ ಅಂತ ಛೇಡಿಸಿತು ಬೇತಾಳ.
‘ಬಣ ಬಡಿದಾಟಕ್ಕೆ ಗುಗ್ಗುಳ ಹಾಕಿ ‘ಅಹಹಾ ರುದ್ರ, ಅಹಹಾ ದೇವಾ, ಮೂರು ಸಾವಿರ ನಯನ, ಎರಡು ಸಾವಿರ ಭುಜ. ಇಂತಿಪ್ಪ ದೇವರು ಹ್ಯಂಗೆ ಬರುತಾರಂದ್ರೆ...’ ಅಂತ ಒಡಪು ಹೇಳಿಕ್ಯಂದು ಕುಣಿಯೋ ರಾಜಕಾರಣಿಗಳು ಇದ್ದಾಗ ಜನ ಏನು ಮಾಡಬಕು ರಾಜನ್?’ ಬೇತಾಳ ಚಿಂತೆಗೆ ಬಿತ್ತು.
‘ಈಗ ನನ್ನ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರ ಕೊಡದೇ ಹೋದರೆ ನಿನ್ನ ತಲೆ ಸರ್ಕಾರಿ ಜಾಲತಾಣದಂಗೆ ಹ್ಯಾಂಗಾಗುವುದು’ ಅಂದಿತು.
ವಿಕ್ರಮಾದಿತ್ಯನು ಚುರುಕಾಗಿ ‘ಜನರೆಲ್ಲಾ ಜಾಣರಾಗಿರಿ, ಜಾಗರೂಕರಾಗಿರಿ’ ಎಂದೊಡನೇ ಬೇತಾಳವು ರಾಜನನ್ನು ಬುಟ್ಟು ಪೇರಿ ಕಿತ್ತಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.