ADVERTISEMENT

ಚುರುಮುರಿ | ಮುಳ್ಳು ಮುರಿಯೋರು!

ಲಿಂಗರಾಜು ಡಿ.ಎಸ್
Published 5 ಜೂನ್ 2023, 18:56 IST
Last Updated 5 ಜೂನ್ 2023, 18:56 IST
   

‘ಸಾ, ಈಗ ಟೈರು ಪಂಕ್ಚರ್ ಹಾಕೋರು ರೋಡಲ್ಲೆಲ್ಲಾ ಮೊಳೆ ಎಸೆದು ಹೋಯ್ತರಂತೆ. ಇದೊಂದು ಮಾಫಿಯಾ ಆಗ್ಯದೆ ಅಂತ ಪೇಪರಿನಗೆ ಬಂದುತ್ತು’ ವಿವರ ಕೊಟ್ಟೆ.

‘ಹ್ಞೂಂ ಕಲಾ, ಎಲ್ಲತ್ಕೂ ಮುಳ್ಳೆಳದು ಪಂಕ್ಚರ್ ಮಾಡೋದೇ ಕೆಲವರಿಗೆ ಕ್ಯಾಮೆ ಆಗಿಬುಟ್ಟದೆ. ಕೈ ಪಕ್ಸ ಗ್ಯಾರಂಟಿ ಕೊಡ್ತೀವಿ ಅಂತ ಮುಳ್ಳೆಳಕಂದಿಲ್ವೇ’ ತುರೇಮಣೆ ಬಾಣ ಬುಟ್ಟರು.

‘ಹಳೇ ಸರ್ಕಾರದೋರೂ ತಮ್ಮ ಸುತ್ತ ಮುಳ್ಳೆಳಕಂಡಿದ್ರು. ಅದ ದಾಟಿ ಬರಕಾಗ್ದೇ ಈಗ ಅಂಡಿಗೆ-ಮುಂಡಿಗೆ ಮುಳ್ಳು ಹೆಟ್ಟಿ ರೋಸಾಗ್ಯದೆ’ ಅಂತ ನಗಾಡಿದೆ.

ADVERTISEMENT

‘ಏಡೇಡು ಸಾವಿರ ಕಾಸು ಕೊಟ್ಟೇವು ಮನೆ ಗೃಹಲಕ್ಷ್ಮಿಗೆ ಅಂತಂದು ಚೆನ್ನಾಗಿದ್ದ ಅತ್ತೆ-ಸೊಸೆ ಮಧ್ಯೆ ಮುಳ್ಳೆಳೆದವ್ರೆ. ನಮಗೂವೆ ವಯೋನಿಧಿ, ಮಿಳ್ಳೆ ಭಾಗ್ಯ, ಬಿರಿಯಾನಿ ಶಕ್ತಿ ಅಂತ ಗ್ಯಾರಂಟಿ ಕೊಟ್ಟಿದ್ರೆ ನಚ್ಚಗಾಗದಪ್ಪ’ ಯಂಟಪ್ಪಣ್ಣ ಬಾಯಿ ಚಪ್ಪರಿಸಿತು.

‘ಒಡವೆ ಅಂಗಡಿಯೋರು ಪೇಪರಲ್ಲಿ, ಟೀವಿಯಲ್ಲಿ ಒಂದೇ ಸಮ ‘ಹಳೇ ಒಡವೆ ಮಾರಿ ಮಸಾಲೆದೋಸೆ ತಿಂದ್ಕಳಿ’ ಅಂತ ಮುಳ್ಳು ಚುಚ್ಚತರೆ. ಇದು ಸಾಲದು ಅಂತ ಕ್ರಿಕೆಟ್ ಅಣ್ತಮ್ಮಗಳು ‘ಬಲ್ರಿ ಆನ್‍ಲೈನ್ ಕ್ರಿಕೆಟ್ ಆಡಮು, ಕೋಟಿ ಗೆಲ್ಲೂರಿ’ ಅಂತ ಮುಳ್ಳಿಡಕಂದು ನಿಂತಿರತರೆ. ಇದು ಸಾಲದು ಅಂತ ನಮಗೆ ಕರಂಟು ರೇಟು ಮುಳ್ಳು, ಪೆಟ್ರೋಲ್-ಗ್ಯಾಸ್ ಮುಳ್ಳು, ಸ್ಕೂಲ್ ಫೀಜು ಮುಳ್ಳು, ತೆರಿಗೆ ಮುಳ್ಳು ಅಂತ ಸುಮಾರು ಹೆಟ್ಟಿಕ್ಯಂದವೆ’ ಅಂದ ಚಂದ್ರು.

‘ಸರ್ಕಾರ ದುಡಿಯೋರಿಗೆ ಕೆಲಸ ಕೊಡ್ಲಿ. ರೋಡುಗುಂಡಿ ಮುಚ್ಲಿ, ಸೌಕರ್ಯ ಅಭಿವೃದ್ಧಿ ಮಾಡ್ಲಿ. ಕ್ರೀಡಾ ಕ್ಷೇತ್ರದ ಪಟಿಂಗ ಮುಳ್ಳುಗಳು, ರಾಜಕೀಯದ ಜೊಳ್ಳುಗಳು, ಧರ್ಮ ಕುಲಗೆಡಿಸೋ ಮುಳ್ಳುಗಳು, ಭ್ರಷ್ಟ ಅಧಿಕಾರಿ ಮುಳ್ಳುಗಳನ್ನ ಕಿತ್ತಾಕ್ಲಿ. ಜನ ವಿಷದ ಮುಳ್ಳುಗಳ ಭಯ ಇಲ್ಲದೆ ಬದುಕಬೇಕು ಕಯ್ಯಾ!’ ತುರೇಮಣೆ ಮ್ಯಾನಿಫೆಸ್ಟೊ ಕೊಟ್ಟರು. ಇದು, ರಾಜಕಾರಣಿಗಳ ಸ್ವಂತ ಅಭಿವೃದ್ಧಿ ಆಸೆ ನಿಲ್ಲೋಗಂಟ ಆಗದ ಲೆಕ್ಕಾಚಾರ ಅನ್ನಿಸಿತು.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.