ADVERTISEMENT

ಚುರುಮುರಿ: ಹುದ್ದೆ ಖರೀದಿ

ಮಣ್ಣೆ ರಾಜು
Published 10 ಮೇ 2022, 23:15 IST
Last Updated 10 ಮೇ 2022, 23:15 IST
   

ತಮ್ಮ ಮಗನಿಗೊಂದು ಉದ್ಯೋಗ ಖರೀದಿಸಲು ಶಂಕ್ರಿ, ಸುಮಿ ಹುದ್ದೆ ಅಂಗಡಿಗೆ ಬಂದಿದ್ದರು.

‘ಗುಣಮಟ್ಟದ, ದೀರ್ಘ ಬಾಳಿಕೆ ಬರುವ ಹುದ್ದೆ ತೋರಿಸಿ...’ ಎಂದ ಶಂಕ್ರಿ.

‘ಖಾಕಿ ಕಲರ್‌ನ ಪೊಲೀಸ್ ಆಫೀಸರ್, ವೈಟ್ ಕಲರ್‌ನ ಡಾಕ್ಟರ್ ಹುದ್ದೆ ತೋರಿಸಲಾ?’ ಅಂಗಡಿಯವ ಕೇಳಿದ.

ADVERTISEMENT

‘ಬೇರೆ ಕಲರ್, ಡಿಸೈನಿನ ಹುದ್ದೆಗಳಿಲ್ಲವಾ?’ ಸುಮಿ ಕೇಳಿದಳು.

‘ಎಲ್ಲಾ ಕಲರ್‌ಗಳಲ್ಲಿ ಎಂಜಿನಿಯರ್, ಲೆಕ್ಚರರ್, ಗೆಜೆಟೆಡ್ ಆಫೀಸರ್ ಹೀಗೆ ವೆರೈಟಿ ಹುದ್ದೆಗಳು ನಮ್ಮಲ್ಲಿವೆ’ ಎಂದ.

‘ಮಮ್ಮಿ, ನನಗೆ ಎಂಜಿನಿಯರ್ ಬೇಡ, ಡಾಕ್ಟರ್ ಹುದ್ದೆ ಕೊಡಿಸಿ’ ಮಗ ಹಟ ಮಾಡಿದ.

‘ಬೇಡ್ವೋ, ಡಾಕ್ಟರ್ ಕಾಸ್ಟ್‌ಲಿ, ಬೇಕಾದ್ರೆ ವೆಟರ್ನರಿ ಡಾಕ್ಟರ್ ಹುದ್ದೆ ಕೊಡಿಸ್ತೀನಿ’ ಅಂದ ಶಂಕ್ರಿ.

‘ಯಾವುದೂ ಬೇಡ, ಸದ್ಯಕ್ಕೆ ಲೆಕ್ಚರರ್ ಆಗು, ಆಮೇಲೆ ಯಾವುದಾದರೂ ಯೂನಿವರ್ಸಿಟಿ
ಯಲ್ಲಿ ಡಾಕ್ಟರೇಟ್ ಕೊಡುಸ್ತೀವಿ’ ಸುಮಿ ಸಮಾಧಾನ ಹೇಳಿದಳು.

‘ಬೈ ಒನ್, ಗೆಟ್ ಒನ್ ಆಫರ್ ಇದೆಯಾ?’ ಶಂಕ್ರಿ ಕೇಳಿದ.

‘ನನ್ನ ಮೈದುನ ಕೆಲಸವಿಲ್ಲದೆ ಪೋಲಿ ಅಲೀತಿದ್ದಾನೆ, ಅವನಿಗೊಂದು ಗುಮಾಸ್ತ ಹುದ್ದೆ ಕೊಡಿಸಿ ಜವಾಬ್ದಾರಿ ಕಳ್ಕೊಳ್ಳೋಣ ಅಂತ...’ ಅಂದಳು ಸುಮಿ.

‘ಕಲರ್, ಕಸುಬು ಇಷ್ಟ ಆಗದಿದ್ದರೆ ಹುದ್ದೆಯನ್ನು ಎಕ್ಸ್‌ಚೇಂಜ್ ಮಾಡಬಹುದಾ?’ ಶಂಕ್ರಿ ಕೇಳಿದ.

‘ನೋ ಎಕ್ಸ್‌ಚೇಂಜ್...’

‘ರೀ, ನಿಮ್ಮ ಹುದ್ದೆ ಹಳೆಯದಾಗಿದೆ, ಹೊಸದನ್ನು ಕೊಂಡುಕೊಳ್ಳಿ...’ ಸುಮಿ ಗಂಡನಿಗೆ ಹೇಳಿದಳು.

‘ಸಾರ್, ನಿಮ್ಮ ಏಜಿಗೆ, ಸೈಜಿಗೆ ಮ್ಯಾಚಾಗುವ ಮಂತ್ರಿ, ಮುಖ್ಯಮಂತ್ರಿ ಹುದ್ದೆಗಳಿವೆ’.

‘ಬೇಡಾರೀ, ಅಷ್ಟೊಂದು ದುಡ್ಡಿಲ್ಲ...’

‘ಈಗ ಫಾರ್ಟಿ ಪರ್ಸೆಂಟ್ ಕೊಡಿ. ಬಾಕಿ ಹಣವನ್ನು ಕಂತುಗಳಲ್ಲಿ ಪಾವತಿಸಬಹುದು...’ ಅಂಗಡಿಯವ ಆಫರ್ ಕೊಟ್ಟ...

ಮಲಗಿದ್ದ ಶಂಕ್ರಿಯ ನಿದ್ರೆ ಭಂಗ ಮಾಡಿದ ಸುಮಿ, ‘ರೀ, ಇವತ್ತು ಟೀವಿ ಸಾಲದ ಕಂತು ಕಟ್ಟಬೇಕು...’ ಎಂದು ಜ್ಞಾಪಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.