ADVERTISEMENT

ಚುರುಮುರಿ: ಮುಳ್ಳಿನಿಂದ ಮುಳ್ಳು

ಆನಂದ ಉಳಯ
Published 4 ಮೇ 2022, 19:31 IST
Last Updated 4 ಮೇ 2022, 19:31 IST
   

ಒಂದಿಷ್ಟು ಮಂದಿ ಕಳ್ಳರನ್ನ ಪೊಲೀಸರಾಗಿ ನೇಮಿಸಿದರೆ ಚಲೊ ಇರ್ತದಲ್ಲಾ ಸಾಹೇಬ್ರೆ? ಎಂದು ಗೆಳೆಯ ಕೇಳಿದಾಗ ನನಗೆ 840 ವೋಲ್ಟ್ ಷಾಕ್ ಹೊಡೆದಂತಾಯಿತು.

ಕುರಿ ಕಾಯೋದಿಕ್ಕೆ ತೋಳಾನ ನೇಮಿಸ್ತಾರೇನೋ? ಎಂದೆ.

ಮತ್ತೆ ಸೆಟ್ ಎ ಥೀಫ್ ಟು ಕ್ಯಾಚ್ ಎ ಥೀಫ್ ಅಂತಾರಲ್ಲ ಸಾರೂ ಎಂದಾಗ ನನಗೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಇನ್ನೊಂದು ‘ಥಾಟ್ ಫಾರ್ ದಿ ಡೆ’ ನೆನಪಾಯಿತು.

ADVERTISEMENT

ಈಗ್ಯಾಕೆ ನೀನು ಕಳ್ಳರನ್ನ ಪೊಲೀಸರನ್ನಾಗಿ ನೇಮಿಸಲು ಹೊರಟೆ ಎಂದು ಕೇಳಿದೆ.

ಈ ಹರಡ್ತಾ ಹಬ್ಬಿಕೊಳ್ತಾ ಇರೊ ಪಿಎಸ್‍ಐ ಹಗರಣ ನೋಡಿದಾಗ ನನಗೆ ಈ ಐಡಿಯಾ ಹೊಳೆಯಿತು, ಕೆಂಪು ಚಂದನ ಕಳ್ಳತನ ಮಾಡಿದ್ದ ಒಬ್ಬಾತ ಪಿಎಸ್‍ಐ ಟಾಪರ್ ಆಗ್ಯಾನಾ ಅಂದರೆ ಅವನದು ಬಹುಮುಖ ಪ್ರತಿಭೆ. ಅಂತಹವನು ಪೊಲೀಸನೇ ಆದರೆ ಇತರ ನಿಜವಾದ ಕಳ್ಳರನ್ನ ಲೀಲಾಜಾಲವಾಗಿ ಹಿಡಿಯಬಹುದಲ್ಲವೆ? ಎಂದು ಕೇಳಿದಾಗ ಅವನ ವಾದದಲ್ಲಿ ಲಾಜಿಕ್ ಇರಬಹುದೆ ಎಂದೆನಿಸಿತು.

ಆದುದರಿಂದ ಈಗಿರುವ ಮಿಸಲಾತಿಯ ಜತೆಗೆ ಇಂತಹವರಿಗೂ ಕೋಟಾ ಕಲ್ಪಿಸಿದರೆ ಪೊಲೀಸರ ಬಲವರ್ಧನೆ ಆಗದೇ ಸಾರೂ ಎಂದು ಕೇಳಿದ.

ನಮ್ಮಿಬ್ಬರ ಈ ಇಂಟಲೆಕ್ಷುಯಲ್ ಡಿಸ್ಕಷನ್ ಕೇಳಿಸಿಕೊಳ್ಳುತ್ತಿದ್ದ ಹೆಂಡತಿ ಮಧ್ಯೆ ಪ್ರವೇಶಿಸಿ ಈಗಾಗಲೇ ಅನೇಕ ಇಂತಹವರು ಪೊಲೀಸರಾಗಿಲ್ಲವೇನ್ರಿ? ಹೊಸದಾಗಿ ನೇಮಕ ಮಾಡಿಕೊಳ್ಳಬೇಕಾ? ಎಂದು ಕೇಳಿದಾಗ ನಾವಿಬ್ಬರೂ ಬೆಚ್ಚಿದೆವು.

ಹೌದ್ರೀ, ಅನೇಕ ಪೊಲೀಸರು ಗಳಿಸಿರುವ ಆಸ್ತಿ, ಕಟ್ಟಿರುವ ಮನೆ ನೋಡಿದಾಗ ಅದು ಕಳ್ಳತನದ ಮಾಲು ಅಂತ ಅನಿಸೊಲ್ಲವೆ? ಬ್ಯಾಂಕಿಗೆ ಜಮಾ ಆಗೊ ಸಂಬಳದಿಂದ ಅದೆಲ್ಲಾ ಮಾಡೋದಿಕ್ಕೆ ಆಗ್ತಿತ್ತೆ? ಎಂದು ಸಪ್ಲಿಮೆಂಟರಿ ಪ್ರಶ್ನೆ ಎಸೆದಳು. ಛೆ ಛೆ ಎಲ್ಲರೂ ಹಾಗಿಲ್ಲ ಮೇಡಂ ಎಂದ ನನ್ನ ಗೆಳೆಯ.

ನಾನೆಲ್ಲಿ ಹಾಗೆಂದೆ. ಕೆಲವರು ಮಾತ್ರ ನೀವು ಕೇಳ್ತಾ ಇರೊ ಕೋಟಾಕ್ಕೆ ಸೇರಿದೋರು. ಆದರೆ ಅವರ ಪ್ರತಿಭೆ ಉಪಯೋಗಕ್ಕೆ ಬರತಾ ಇಲ್ಲ ಎಂದು ಹೇಳಿ ಕಾಫಿ ತರಲು ಹೋದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.