ADVERTISEMENT

ಚುರುಮುರಿ| ಕೋವಿಡ್ ಮಾರ್ಗಸೂಚಿ

ಲಿಂಗರಾಜು ಡಿ.ಎಸ್
Published 19 ಏಪ್ರಿಲ್ 2021, 19:30 IST
Last Updated 19 ಏಪ್ರಿಲ್ 2021, 19:30 IST
CamScanner 04-19-2021 15.12churumuri-20-04-2021.jpg
CamScanner 04-19-2021 15.12churumuri-20-04-2021.jpg   

ಬೋದರೆಗುದ್ದನಹಳ್ಳಿ ಕ್ಷೇತ್ರದ ಜನಪ್ರಿಯ ರಾಜಕಾರಣಿಗಳು ಬೇಜಾರಲ್ಲಿ ಕೂತುದ್ದು ಕಂಡು ‘ಯಾಕಣ್ಣ?’ ಅಂತ ಇಚಾರಿಸಿದೆ.

‘ನೋಡ್ಲಾ, ನಮ್ಮ ಪಿಎಂ, ಸಿಎಮ್ಮು ಸೇರಿ ಜನಸಂಪರ್ಕದಲ್ಲಿರೋ ಹಿರಿ-ಕಿರಿ ನಾಯಕರಿಗೆಲ್ಲಾ ಕೋವಿಡ್ ಸೋಂಕಾಯ್ತಾದೆ. ನನಗೆ ಇಲ್ಲೀಗಂಟಾ ಕೊರೊನಾ ಬಂದುಲ್ಲ. ಜನಸಂಪರ್ಕ ಕಮ್ಮಿ ಆಯ್ತಾ ಇರದೇ ಕಾರಣ ಅಂತ ನಮಗಾಗದೋರು ಆಡಿಕ್ಯತಾವ್ರೆ’ ಅಂತ ಬ್ರೇಕಿಂಗ್ ನ್ಯೂಸ್ ಬುಟ್ಟರು.

‘ನಿನ್ನ ಆರೋಗ್ಯ ಚೆನ್ನಾಗದಲ್ಲ ಅದುಕ್ಕೆ ಕುಸಿಪಡಣ್ಣ’ ಅಂದೆ. ‘ಲೇಯ್, ನಮ್ಮ ಪಕ್ಸದೋನೆ ಒಬ್ಬ ‘ನಾನು ಜನದ ಮಧ್ಯೆನೇ ಇರೋವೊತ್ಗೆ ಮೂರು ಸಾರಿ ಕೊರೊನಾ ಬಂದದೆ. ಜನಪ್ರಿಯತೆ ಮಾರ್ಗಸೂಚಿ ಪ್ರಕಾರ ಮುಂದ್ಲ ಎಲೆಕ್ಸನ್ನಲ್ಲಿ ನನಗೇ ಸೀಟು ಕೊಡಬೇಕು’ ಅಂತ ಹೈಕಮಾಂಡಿಗೆ ಅಪ್ಲಿಕೇಸನ್ ಹಾಕ್ಯಂಡವನೆ. ಅದುಕ್ಕೆ ಕೌಂಟ್ರು ಮಾಡಲೇಬೇಕು! ನೀನು ಇಲ್ಲಿದ್ದೋನಂಗೇ ವೋಗಿ ಕೊರೊನಾ ಟೆಸ್ಟ್ ಮಾಡಕ್ಕೆ ಒಬ್ಬ ಡಾಕ್ಟರು ಕರಕಬರೋಗು!’ ಅಂದ್ರು.

ADVERTISEMENT

‘ಯಾವ ಡಾಕ್ಟ್ರು ಬಂದಾರಣ್ಣ!’ ಅಂದೆ.

‘ಲೇಯ್, ನಿನ್ನ ಪ್ರೆಂಡು ಮನ್ನೆ ಪಿಂಕಿ ವೀನಿವರ್ಸಿಟಿಯಿಂದ ಡಾಕ್ರಾದನಲ್ಲೋ ಅವುನ್ನೇ ಕರಕಬರೋಗು’ ಅಂತ ಜುಲುಮೆ ಮಾಡತೊಡಗಿದರು.

‘ಯಣ್ಣಾ, ಅವರು ಗೌರವ ಡಾಕ್ಟರೇಟ್ ತಗಂಡಿರಾ ಆಲೆಮನೆ ಓನರು ಕನಣ್ಣಾ’ ಅಂದೆ.

ನಾಯಕರು ಸಿಟ್ಟಾಗಿ ‘ಲೋ ಜನಕ್ಕೇನು ಗೊತ್ತಾದದ್ಲಾ? ಅವುರುನ್ನೇ ಕರಕಬಂದು ‘ನಾಯಕರಿಗೆ ಕೊರೊನಾ ಅಟಕಾಯಿಸಿಕ್ಯಂಡದೆ. ಈಗ ಮನೇಲೇ ಕ್ವಾರಣ್ಯದಲ್ಲವರೆ. ಅವರ ಆರೋಗ್ಯ ಸ್ಥಿರವಾಗದೆ’ ಅಂತ ಹೆಲ್ತ್ ಬುಲೆಟಿನ್ ಬುಡ್ಸು. ಕೊರೊನಾ ಬಂದೋರಿಗೆ ವಸಾ ಬ್ರಾಂಡು ರಮ್ಮು ಡಿಸಿವರ್ ಅಂತಾ ಕೊಟ್ಟಾರಂತಲ್ಲೋ! ಅದೀಗ ಸಿಕ್ತಿಲ್ಲವಂತೆ. ಸರ್ವರೋಗಕ್ಕೂ ಸಾರಾಯಿ ಮದ್ದು ಅಂತ ಗೊತ್ತಾಯ್ತಲ್ಲ! ‘ಕೊರೊನಾ ಮ್ಯಾಳ ಮಾಡ್ತುದವಿ. ಟೆಸ್ಟ್ ಮಾಡಿಸಿಗ್ಯಳಿ, 90 ರಮ್ಮು ತಗಳಿ, ಮಾಸ್ಕಾಕ್ಕಳಿ’ ಅಂತ ಪಾಂಪ್ಲೆಟ್ ಹೊಡಸು’ ಅಂದು, ಕೊರೊನಾ ಸೋಂಕಿತರ ಥರಾ ಪ್ರ್ಯಾಕ್ಟೀಸ್ ಮಾಡತೊಡಗಿದರು.

ನಾಯಕರಿಗೆ ಜನರ ಮೇಲಿರೋ ರೋಗ ದ್ವೇಷ ನೋಡಿ ನನಗೆ ಕಣ್ಣಲ್ಲಿ ನೀರು ಕಡದೋ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.