‘ಮಾತು ಮನೆ ಕೆಡುಸ್ತು ಅಂತಾರೆ, ಇಲ್ ನೋಡುದ್ರೆ ಮನೆನೇ ಮಾತು ಕೆಡಿಸಿದೆ’ ಎಂದ ಗುದ್ಲಿಂದ ಹರಟೆಕಟ್ಟೇಲಿ!
‘ಇಂತ ವಸತಿ ತಾಪತ್ರಯಗಳನ್ನು ನೋಡೇ ಯೋಳಿದ್ದು. ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ ಅಂತ’ ಎಂದ ಮಾಲಿಂಗ.
‘ಆಳೋರು ಅದನ್ನ ಅಲ್ಲಿದೆ ಮೇಲ್ಮೆನೆ, ಕೆಳಮನೆ, ಇಲ್ಲಿರುವುದು ಜುಮ್ಮನೆ ಅಂದ್ಕೊಂಡಿರೋ ಅಂಗದೆ’.
‘ಏನೂ ಕೊಡದೆ ವಸತಿ, ಏನೂ ಕೇಳದ ಸತಿ, ಸಂಬಳ ತಿಂಗಳಿಗೊಂದು ಸರ್ತಿ, ಜೊತೆಗೆ ಗಿಂಬಳ ಜೇಬು ಭರ್ತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅನ್ನೋ ಅಂಗಾಗದೆ’.
‘ವೂ ಕಣಪ್ಪ, ಈ ಮನೆ ವಿಷಯಕ್ಕೇ ಕೈ ಮನೇಲಿ ಭಾರೀ ಭೂಕಂಪ ಆಗದೆ’.
‘ಒಮ್ಮೆಮ್ಮೆ ಆಗೋದೇ ಹೀಗೆ, ಹರಡುತ್ತದೆ ಅಸಮಾಧಾನದ ಹೊಗೆ, ಮೊದಲು ಪಾಟೀಲು, ಆಮೇಲೆ ರಾಜು ಕಾಗೆ. ಮದ್ದು ಅರೆದಿದ್ದಾರೆ ದೆಹಲಿಗೆ ಕರೆಸಿ ಖರ್ಗೆ!’ ಎಂದು ಪ್ರಾಸ ಕಟ್ಟಿದ ಕಲ್ಲೇಶಿ.
‘ಏನೇ ಮದ್ ಅರುದು ಮುಚ್ ಹಾಕುದ್ರೂ ಮತ್ತೆ ಮನೆ ಬಾಗಿಲು ಹಾರೊಡ್ಕೊಂಡು ಬಟಾ ಬಯಲಾಗ್ತದೆ ಕಣ್ಲಾ! ನಮ್ ಮಂತ್ರಿಗಳು ಯೋಳಿಲ್ವಾ? ಪವರ್ ಸೆಂಟ್ರು 3-4 ಆಗವೆ ಅಂತ. ಅಂದ್ಮೇಲೆ ಒಂದೊಂದು ಪವರ್ ಪೀಠಕ್ಕೂ ಒಂದೊಂದು ಬಾಗ್ಲು ಇರ‍್ಬೇಕಲ್ಲ...’
‘ಕೈ ಮನೆ ಅಂತ ಅಲ್ಲ, ಕಮಲ ಮನೆ, ತೆನೆ ಮನೆ ಎಲ್ಲಾ ಕಡೇಲೂ ಇಂಗೇ ಆಗದೆ! ಮನೆಯೊಂದು ಮೂರು ಬಾಗಿಲು... ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕ ಅಂಗೆ ತಗ್ಗಿ ಬಗ್ಗಿ ಪೀಠಕ್ಕೆ ನಡ್ಕಬೇಕು’.
‘ಅದೇ ಎಡವಟ್ಟಾಗಿರೋದು! ತಲೆ ಬಗ್ಗುಸ್ದಿದ್ರೆ ಬುಲ್ಡಗೆ ಹೊಡೆಯುತ್ತೆ. ಹೊಸಿಲು ದಾಟಕ್ ಓದ್ರೆ ಪಂಚೆ ಹರಿತದೆ, ಇಂಗಾದ್ರೆ ಎಂಗೆ ಅಂತ’.
‘ಇದ್ಕೆಲ್ಲಾ ತ್ಯಾಪೆ ಹಾಕ್ಬೇಕು ಅಂತಾನೇ ಸಿ.ಎಂ ಸಾಹೇಬ್ರು ಇನ್‌ಮ್ಯಾಗೆ ಶಾಸಕರನ್ನ ಬ್ರೇಕ್‌ಫಾಸ್ಟ್‌ಗೆ ಕರೀತಾರಂತೆ’.
‘ಸಿ.ಎಂ ತಿಂಡಿ, ವಸತಿ ಕೊಟ್ರೆ ಮನೆ ಸತಿ ಮಾಡಿದ್ ತಿಂಡಿ ಯಾರ್ ತಿನ್ಬೇಕು? ಮನಸ್ಸು ಬ್ರೇಕು, ವರ್ಷವೆಲ್ಲಾ ಫಾಸ್ಟು ( ಉಪವಾಸ). ಆಮೇಲ್ ಶಾಸಕರು ಸೆಷನ್ ಇಲ್ದೆ ಇದ್ದಾಗ್ಲೂ ಮನೆ ಕಡೆ ಓಗ್ದಂಗಾಗೋಯ್ತದೆ’ ಎಂದ ಪರ್ಮೇಶಿ. ಎಲ್ಲಾ ಗೊಳ್ಳನೆ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.