ADVERTISEMENT

ಚುರುಮುರಿ| ಬೊಜ್ಜು, ಬೆಲ್ಟು, ಬೈಸಿಕಲ್!

ಎಸ್.ಬಿ.ರಂಗನಾಥ್
Published 29 ಸೆಪ್ಟೆಂಬರ್ 2021, 19:30 IST
Last Updated 29 ಸೆಪ್ಟೆಂಬರ್ 2021, 19:30 IST
Churumuri--30092021
Churumuri--30092021   

ಒಂದೂವರೆ ವರ್ಷದಿಂದ ಮನೆಯಿಂದಲೇ ಆಫೀಸು ಕೆಲಸ ಮಾಡುತ್ತಿದ್ದ ಚಿಕ್ಕೇಶಿ, ಮಿನಿಸ್ಟರ್ ಪ್ರೋಗ್ರಾಮ್ ಇದೆ ಎಂದು ವಾರದಿಂದ ಆಫೀಸಿಗೆ ಹೋಗುತ್ತಿದ್ದ.

ಇವತ್ತು ಕಚೇರಿಗೆ ಹೊರಡುವ ತರಾತುರಿಯಲ್ಲಿ ಪ್ಯಾಂಟಿಗೆ ಬೆಲ್ಟ್ ಹಾಕಿಕೊಳ್ಳಲು ಹೆಣಗಾಡುತ್ತಿದ್ದವನಿಗೆ ಪತ್ನಿ ಚಿನ್ನಮ್ಮ, ‘ಮೂರು ಹೊತ್ತೂ ಮೊಬೈಲ್ ಹಿಡ್ಕೊಂಡು, ಟಿ.ವಿ ಮುಂದೆ ಕುಂತು ಬೊಜ್ಜು ಬೆಳೆಸಿಕೊಂಡ್ರೆ ಇನ್ನೇನಾಗತ್ತೆ?’ ಎಂದಳು.

‘ಮಾರಾಯ್ತಿ, ವರ್ಕ್ ಫ್ರಮ್ ಹೋಮ್ ಜೊತೆಗೆ ವರ್ಕ್ ಫಾರ್ ಹೋಮ್ ಅನ್ನೂ ಮಾಡ್ತಿದೀನಲ್ಲಾ. ಡಿಷ್ ವಾಷರ್, ವಾಷಿಂಗ್ ಮಷೀನ್, ಫ್ಲೋರ್ ವಾಷರ್‌ಗಳ ಕೆಲ್ಸಗಳೆಲ್ಲಾ ನನ್ನವೇ. ಮೊಬೈಲ್, ಟಿ.ವಿ ರಿಮೋಟ್ ಯಾವಾಗ್ಲೂ ಕಾಣೆಯಾಗಿರುತ್ವೆ, ಇನ್ನು ಟಿ.ವಿ ನೋಡೋದೆಲ್ಲಿ ಬಂತು?’ ಎಂದ.

ADVERTISEMENT

‘ಮಡ್ಡಿತಲೆ, ಗಣಪತಿ ಒಡೆದ ಹೊಟ್ಟೆ ಕೂಡಿಸೋಕೆ ಹಾವನ್ನು ಕಟ್ಟಿಕೊಂಡಂತೆ ಈ ಲೆದರ್ ಬೆಲ್ಟ್ ಬಿಗಿದುಕೊಳ್ಳಿ’ ಎನ್ನುತ್ತಾ ಬೇರೆ ಬೆಲ್ಟ್ ಕೈಗಿತ್ತಳು.

ಅಷ್ಟರಲ್ಲಿ ಬಂದ ಕುಮಾರಕಂಠೀರವ, ‘ಪಪ್ಪಾ, ವಾರದಿಂದ ಮೇಷ್ಟ್ರು ‘ನಿನ್ನ ಬೈಸಿಕಲ್ ಎಲ್ಲಿ? ತರದಿದ್ರೆ ಕ್ಲಾಸಿಂದ ಹೊರಗಾಕ್ತೀನಿ ಅಂತಿದಾರೆ. ಇವತ್ತು ನಾನು ಸೈಕಲ್ ಒಯ್ಯಲೇಬೇಕು. ಆಫೀಸಿಗೆ ಸ್ಕೂಟರಲ್ಲಿ ಹೋಗ್ರಿ’ ಎಂದ.

‘ಅದ್ರಲ್ಲಿ ಪೆಟ್ರೋಲ್ ಇಲ್ಲಯ್ಯಾ. ಪೆಟ್ರೋಲ್ ಬೆಲೆ ಇಳಿಯೋವರೆಗೆ ತಡ್ಕೋ. ಆಮೇಲೆ ನಿನ್ನ ಸೈಕಲನ್ನ ನೀನೇ ಒಯ್ಯುವಂತೆ, ಯಾರು ಬೇಡಾಂತಾರೆ’.

ಮಗನ ಪರವಾಗಿ ಅಮ್ಮನ ದಿಢೀರ್ ವಕಾಲತ್ತು- ‘ಹಾಗಾದ್ರೆ ಅವನಿಗೆ ಈ ಜನ್ಮದಲ್ಲಿ ಅವನ ಸೈಕಲ್ ಸಿಕ್ಕಂತೆಯೇ... ನಿಮ್ಮ ಆಫೀಸು ಎರಡೇ ಕಿಲೊ ಮೀಟರ್, ನಡ್ಕೊಂಡು ಹೋಗಿ ಆರೋಗ್ಯಕ್ಕೆ ಒಳ್ಳೇದು, ಬೊಜ್ಜೂ ಕರಗುತ್ತೆ’.

ಮಗ ‘ಟಾಟಾ, ಬೈಬೈ’ ಎನ್ನುತ್ತಾ ಸೈಕಲ್ಲೇರಿ ಮಾಯವಾದ. ಮಡದಿ ‘ಸ್ನಾನಕ್ಕೆ ಹೋಗ್ಬೇಕು’ ಎನ್ನುತ್ತಾ ಬಾಗಿಲು ಹಾಕಿಕೊಂಡಳು.

ವಿಶ್ವ ಹೃದಯ ದಿನದಂದಾದರೂ ತಾಯಿ– ಮಗನಲ್ಲಿ ಹೃದಯವಂತಿಕೆ ಇಲ್ಲವಲ್ಲ ಎಂದು ಪರಿತಪಿಸುತ್ತಾ ಚಿಕ್ಕೇಶಿ ಆಫೀಸಿನತ್ತ ಕಾಲೆಳೆದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.