ADVERTISEMENT

ಚುರುಮುರಿ| ಕಾಣ್ತಿತೆ, ಆದ್ರೆ ಕಾಣಕ್ಕಿಲ್ಲ!

ಲಿಂಗರಾಜು ಡಿ.ಎಸ್
Published 27 ಡಿಸೆಂಬರ್ 2021, 17:55 IST
Last Updated 27 ಡಿಸೆಂಬರ್ 2021, 17:55 IST
Churumuri 28122021
Churumuri 28122021   

‘ಅಲ್ಲ, ಶೇರುಪೇಟೆ ಐಲು ಬಂದಂಗೆ ಮ್ಯಾಕ್ಕೋಯ್ತದೆ ಕೆಳಿಕ್ಕೋಯ್ತದೆ. ಮೊನ್ನೆ 9 ಲಕ್ಷ ಕೋಟಿ ಕೈಬುಡ್ತಂತೆ ಕನ್ರೋ! ಆ ದುಡ್ಡೆಲ್ಲಾ ಯಾರಿಗೆ ಸೇರಿಕ್ಯತ್ತು ಅಂತ್ಲೇ ಗೊತ್ತಾಯ್ತಿಲ್ಲ’ ಯಂಟಪ್ಪಣ್ಣ ಕಳವಳ ವ್ಯಕ್ತಪಡಿಸಿತು.

‘ಯಂಟಪ್ಪಣ್ಣ ಶೇರುಪೇಟೇಲಿ ಎಪ್ಪೆಸ್ ಆದ ದುಡ್ಡು ಲೆಕ್ಕಕ್ಕೂ- ಜಮಕ್ಕೂ ಸಿಕ್ಕಕುಲ್ಲ! ಆದ್ರೂ ಸುಮ್ನೆ ಕೇಳ್ತೀನಿ, ಈ ಕೆತ್ತೆಬಜೆ ನಿಮಿಗ್ಯಾಕೆ?’ ಅಂದರು ತುರೇಮಣೆ.

‘ಸಾ, ಹಂಗಂದ್ರೆಂಗೆ? ಅದೇನು ಕಾರುಬಾರು ಬುಡಸೇಳಿ ಸಾ!’ ನಾನು ಕೇಳಿದೆ.

ADVERTISEMENT

‘ಲೋ ಬಡ್ಡೆತ್ತವಾ, ಮೋದಿ ದೊಡ್ಡಪ್ಪಾರು ಎಲೆಕ್ಷನ್ನಿಗೆ ನಿಂತಾಗ ‘ಸ್ವಿಸ್ ಬ್ಯಾಂಕಿಂದ ಬ್ಲಾಕ್‍ಮನಿ ತಂದು ಎಲ್ಲಾರಿಗೂ ತಲಾ 15 ಲಕ್ಷ ಕೊಡ್ತೀನಿ ಅಂದುರಲಿಲ್ಲವೇ? ಅದು ಬಂತಾ? ಮನ್ನೆ ಬಸಣ್ಣ ಬೆಂಗಳೂರಲ್ಲಿ 834 ಕಿಲೊಮೀಟರ್ ಗುಂಡಿ ರಿಪೇರಿ ಆಗ್ಯವೆ ಅಂತಲ್ಲಾ, ಎಲ್ಲಿ? ಹತ್ತೊರ್ಸ ಗ್ಯಾರೆಂಟಿ ಅಂತ ವೈಟ್‍ಟಾಪಿಂಗ್ ಮಾಡಿದ್ದ ರೋಡು ವರ್ಸದೊಳಗೇ ಕಿತ್ತು ಲಾಚಾರಾಗದಲ್ಲಾ ಆ ಸಿಮೆಂಟೆಲ್ಲಾ ಎತ್ತಗೋಯ್ತು? ‘ವಿಧಾನಸಭೆ ಕಲಾಪ ಧರಣಿ ಮಾಡಿಕ್ಯಂಡೇ ನಾಚಾರ್ಲಾಗದೆ. ನಾನು ಅಸಹಾಯಕ’ ಅಂದವ್ರೆ ಅಧ್ಯಕ್ಸರು’.

‘ಸದನದಲ್ಲಿದ್ದ ಮೂರೂಮುಕ್ಕಾಲು ಸದಸ್ಯರಿಗೆ ಅಮರಿಕ್ಯಂಡಿದ್ದ ಬಾಲಗ್ರಹ ಎಲ್ಲೀದು? ಜನಕ್ಕೆ ಎಲ್ಲರೂ ಸೇರಿ ಎರಚ್ತಿರೋ ಮಂಕುಬೂದಿ ಕಾಣಿಸ್ತಾ ಅದಾ? ಇಲ್ಲ ತಾನೆ? ಈ ಪ್ರಶ್ನೆಗಳಿಗೆ ನಿಮ್ಮಯ್ಯನಾಣೆಗೂ ಉತ್ತರ ಗೊತ್ತಿಲ್ಲ ಅಲ್ಲುವೇ! ನೋಡ್ಲಾ, ಶೇರುಪೇಟೆ ದುಡ್ಡೂ ಹಿಂಗೀಯೇ! ಪೂರ್ಣಚಂದ್ರತೇಜಸ್ವಿ ಕಥೇಲಿ ಪ್ಯಾರ ‘ಕಾಣ್ತಿತೆ ಸಾಮಿ, ಆದ್ರೆ ಕಾಣಕ್ಕಿಲ್ಲ’ ಅಂದ್ನಲ್ಲಾ ಹಂಗೇ ಶೇರುಪೇಟೆ ಕಾಸೂ ಕಾಮಗಾರಿ ಪರ್ಸೆಂಟೇಜ್ ಥರಾ ಕಾಣ್ತದೆ, ಆದ್ರೆ ಯಾರಿಗೆ, ಎಷ್ಟೋಗ್ಯದೆ ಅಂತ ಬಿಲ್ಕುಲ್ ಗೊತ್ತಾಗಕುಲ್ಲ’ ಅಂದು ನಿಟ್ಟುಸಿರುಬುಟ್ಟರು.

‘ಅಂದ್ರೆ, ಈ 2021ನೇ ವರ್ಸ ಜನಕ್ಕೆ ಮಾಯಾಬಜಾರ್ ತೋರಿಸ್ಯದೆ! 2022ಕ್ಕೆ ಓಮೈಕ್ರಾನ್ ಇನ್ನೇನು ತೋರಿಸ್ತದೋ!
ಓ ಮೈ ಗಾಡ್!’ ಅಂದು ನನ್ನ ನಿಟ್ಟುಸಿರು ಸೇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.