ADVERTISEMENT

ಚುರುಮುರಿ: ಗುಲ್ಡೋಜರುಗಳು

ಲಿಂಗರಾಜು ಡಿ.ಎಸ್
Published 12 ಸೆಪ್ಟೆಂಬರ್ 2022, 19:31 IST
Last Updated 12 ಸೆಪ್ಟೆಂಬರ್ 2022, 19:31 IST
   

‘ಮತದಲ್ಲಿ ಕೀಳ್ಯಾವುದೋ ವೋಟ್ರಪ್ಪ ಮತದಲ್ಲಿ ಮೇಲ್ಯಾವುದು ಕೀಳ್ಯಾವುದೋ, ಹುಟ್ಟೀ ಸಾಯುವ ಹಾಳು ಮನುಸಾರ ಮತದಲ್ಲಿ ಕೀಳ್ಯಾವುದು ಮೇಲ್ಯಾವುದೋ! ಇಟ್ಟ ನಾಮ ಪರ್ಸೆಂಟೇಜ್ ಬೂದಿ ಕತ್ತ ಕತ್ತಲು ನಿರನಾಮಾ ಹಾ ಒದಿರಿ ಹಾ ಒದಿರಿ ಹಾ ಒದಿರಿ...’ ತುರೇಮಣೆ ಗಾನ ಕೇಳಿ ನಗ ಬಂತು.

‘ಇದೇನ್ಸಾ ಹೊತ್ನಂತೆ ಸತ್ಯ ಹರಿಶ್ಚಂದ್ರನ ನೆನಸಿಗ್ಯತಿದೀರಿ?’ ಅಂತಂದೆ.

‘ಇದು 17 ತ್ಯಾಗಿಗಳು ಮತದಾರರಿ
ಗೋಸ್ಕರ ಹಾಡಿದ ಚರಮಗೀತೆ ಕಯ್ಯಾ. ಎಲೆಕ್ಷನ್ನಿಗೆ ಮೊದಲೇ ಕುಣಿತ ಪ್ರಾಕ್ಟಿಸ್ ಮಾಡಿಕ್ಯತಾವ್ರೆ’ ಅಂತಂದರು.

ADVERTISEMENT

‘ಅದೇನ್ಸಾ ಯಾವುದನ್ನ ಎಲ್ಲಿಗೋ ತಾರಾಕಿ ಲಡ್ಡುಲಸೆ ಅಂತ ಕತೆ ಕಟ್ಟತೀರ!’

‘ನೋಡ್ಲಾ, ಮೊದಲು ಜಲಲ ಜಲಧಾರೆ ಸುರುವಾತಲ್ಲಾ ಜನಕ್ಕೇನಾದ್ರೂ ಪಾಯ್ದೆ ಆಯ್ತಾ? ಇಲ್ಲ! ಆಮೇಲೆ ಪಾದಯಾತ್ರೆ, ಉತ್ಸವ ನಡೆದವಲ್ಲಾ ಜನ ಊರಿಗೋಗಕೆ ದಾರಿ ಇಲ್ದೆ ದಿಕ್ಕಾಪಾಲಾದ್ರು ಅಷ್ಟೇಯ? ಮಾಮೇರಿ ಮಳೆ ಬಿದ್ದು ಜಲಾಘಾತ ಆಯ್ತಲ್ಲಾ. ಜನದ ಕಷ್ಟ ಕೇಳಕೆ ಮಂತ್ರಿಗಳು ಒಂದು ದಿನ ಬಂದು ಕಣ್ಣೀರಾಕಿ ಹೋದ್ರು. ‘ಸಾ, ನಮ್ಮ ಕಷ್ಟ ನೋಡಿ!’ ಅಂದ್ರೆ ‘ದಿನಾ ಸಾಯೋರ್ಗೆ ಅಳೋರ್‍ಯಾರು ತಡೀರ್ಲಾ’ ಅಂದೋರೆ ಸ್ಪಂದನದಲ್ಲಿ ‘ಚೀಲ ನಿಮ್ದು ಅಕ್ಕಿ ನಮ್ದು, ಲಾಂಗು ಡ್ರೈವು ಹೋಗುಮಾ 150 ಸೀಟು ಗೆಲ್ಲುಮಾ...’ ಅಂತ ರೆಡಿಯಾಯ್ತಾವ್ರೆ’ ಅಂದರು.

‘ಹ್ಞೂಂ ಕಪ್ಪಾ, ಜನ ನೆಗೆದುಬಿದ್ದು ಸಾಯಲಿ ಅಧಿಕಾರವೇ ಮುಖ್ಯ. ಎಲ್ಲ ಪಕ್ಸದವೂ ಸೇರಿ ಊರು, ಸೈಟು, ಕೆರೆ ನುಂಗಿ, ರಾಜಕಾಲುವೆ ಜರುಗ್ಸಿದ್ರೂ ಇನ್ನೂ ಹಸಿವು ತೀರಿಲ್ಲ ಕನ್ರೋ’ ಅಂತು ಯಂಟಪ್ಪಣ್ಣ.

‘ಹ್ಞೂಂಕನೇಳಿ, ಒತ್ತುವರಿ ಮಾಡಿದ ಬಡವ್ರಿಗೆ ಬುಲ್ಡೋಜರ್‍ರು, ಉಳ್ಳೋರಿಗೆ ನೋಟಿಸು. ಮನ್ನೆ ಹೆಡ್‍ಮೇಷ್ಟ್ರು ಇನ್‌ಸ್ಪೆಕ್ಷನ್ನಿಗೆ ಬಂದಿದ್ದೋರು ‘ಚೆನ್ನಾಗಿ ಓದಿಕ್ಯಂಡು 100ಕ್ಕೆ 150 ಮಾರ್ಕ್ಸ್ ತಗಬಕು’ ಅಂತ ಹೇಳಿ ಹೋಗ್ಯವುರಂತೆ. ಅ ಸ್ಪಂದನದ ಪ್ರಭಾವ ಇನ್ನೂ ಇಳಿದಿಲ್ಲ’ ಅಂದರು ತುರೇಮಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.