ADVERTISEMENT

ಚುರುಮುರಿ| ಜಲಬಾಧೆ

ಮಣ್ಣೆ ರಾಜು
Published 7 ಸೆಪ್ಟೆಂಬರ್ 2022, 19:31 IST
Last Updated 7 ಸೆಪ್ಟೆಂಬರ್ 2022, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಶಂಕ್ರಿ ಮನೆಗೆ ಮಳೆನೀರು ನುಗ್ಗಿ ಅವಾಂತರ ವಾಗಿತ್ತು. ಪಾತ್ರೆ ಪದಾರ್ಥಗಳು ನೀರಿನಲ್ಲಿ ತೇಲಾಡುತ್ತಿದ್ದವು. ಸ್ವಚ್ಛ ಮಾಡೋದು ಹೇಗೆ ಅಂತ ಗಂಡ, ಹೆಂಡತಿ ತಲೆ ಮೇಲೆ ಕೈ ಹೊತ್ತು ಟೇಬಲ್‌ ಮೇಲೆ ಕುಳಿತಿದ್ದರು.

ಪಕ್ಕದ ಮನೆ ಪದ್ಮಾ ಬಂದು, ‘ನಿಮ್ಮ ಮನೆಯೂ ಜಲಮಂಡಳಿ ಆಗಿದೆಯಲ್ರೀ! ನಮ್ಮ ಮನೆಗೂ ನೀರು ನುಗ್ಗಿದೆ, ಕ್ಲೀನ್ ಮಾಡಲು ಹೆಲ್ಪ್ ಮಾಡ್ತೀರೇನೋ ಅಂತ ಕೇಳಲು ಬಂದೆ’ ಅಂದಳು.

‘ನೀವು ‘ನಾಯಿ ಇದೆ ಎಚ್ಚರಿಕೆ’ ಅಂತ ಬೋರ್ಡ್ ಹಾಕಿದ್ದೀರಿ, ನಾಯಿಗೂ ಹೆದರದೆ ನೀರು ನುಗ್ಗಿಬಿಟ್ಟಿತಾ?’ ಶಂಕ್ರಿ ರೇಗಿಸಿದ.

ADVERTISEMENT

‘ಅವರ ನಾಯಿ ಕಳ್ಳರಿಗೇ ಬೊಗಳೋದಿಲ್ಲ, ಇನ್ನು ನೀರಿಗೆ ಬೊಗಳುತ್ತಾ...’ ಸುಮಿ ಕಿಚಾಯಿಸಿದಳು.

‘ಕಳ್ಳರು ಮನೆಗೆ ನುಗ್ಗಿದರೆ ಪೊಲೀಸರಿಗೆ ಕಂಪ್ಲೇಂಟ್ ಕೊಡಬಹುದು, ನೀರು ನುಗ್ಗಿದರೆ ಯಾರಿಗೆ ಹೇಳೋದು?’ ಪದ್ಮಾಳ ಸಂಕಟ.

‘ಕ್ಲೀನ್ ಮಾಡಲು ನಿಮ್ಮ ಗಂಡ ಹೆಲ್ಪ್ ಮಾಡೋದಿಲ್ವಾ?’

‘ಮಳೆಯಲ್ಲಿ ನೆನೆದು ಶೀತ, ನೆಗಡಿಯಾಗಿ ಅವರು ಮಾತ್ರೆ ನುಂಗಿದ್ದಾರೆ, ನಾನು ದುಃಖ ನುಂಗುವಂತಾಗಿದೆ. ಮಕ್ಕಳು ಪೇಪರ್‌ಬೋಟ್ ಮಾಡಿಕೊಂಡು ಮನೆ ನೀರಲ್ಲಿ ಆಟ ಆಡಿಕೊಂಡಿದ್ದಾರೆ’.

‘ನೀರಿನಲ್ಲಿ ಸಂಸಾರ ಮಾಡುವ ಜಲಚರ ಪ್ರಾಣಿಗಳಾಗಿಬಿಟ್ಟಿದ್ದೀವಿ ನಾವು...’ ಸುಮಿಯೂ ನೊಂದಳು.

‘ನೆಲ, ಜಲ ಎರಡರ ಮೇಲೂ ಬಾಳುವ ಭಾಗ್ಯ ಮನುಷ್ಯರಿಗೂ ಇರಬೇಕಾಗಿತ್ತು’ ಶಂಕ್ರಿ ಆಸೆಪಟ್ಟ.

‘ವ್ಯವಸ್ಥಿತ ರಸ್ತೆ, ಚರಂಡಿ ಇಲ್ಲದೇ ಮನೆಗೆ ನೀರು ನುಗ್ಗುವ ಪರಿಸ್ಥಿತಿ ಬಂದಿದೆ, ನೀವೇ ಬಂದು ಕ್ಲೀನ್ ಮಾಡಿಸಿ ಅಂತ ಕಾರ್ಪೊರೇಟರ್‌ಗೆ ಫೋನ್ ಮಾಡಬೇಕಾಗಿತ್ತು’ ಅಂದಳು ಸುಮಿ.

‘ಮಾಡಿದ್ದೆ, ಅವರ ಹೆಂಡ್ತಿ ರಿಸೀವ್ ಮಾಡಿದ್ದರು, ಅವರ ಮನೆಗೂ ನೀರು ನುಗ್ಗಿ ದೆಯಂತೆ, ಕಾರ್ಪೊರೇಟರ್ ಮನೆ ಕ್ಲೀನ್ ಮಾಡ್ತಿ
ದ್ದಾರಂತೆ. ಅದನ್ನು ಮುಗಿಸಿ ನಮ್ಮನೆಗೆ ಬರ್ತಾ ರಂತೆ...’ ಎಂದು ಹೇಳಿ ಪದ್ಮಾ ಹೊರಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.