ADVERTISEMENT

ಚುರುಮುರಿ: ಬಂಪರ್‌ ಯಾರಿಗೆ?

ಸುಮಂಗಲಾ
Published 2 ಫೆಬ್ರುವರಿ 2025, 23:30 IST
Last Updated 2 ಫೆಬ್ರುವರಿ 2025, 23:30 IST
   

ಬೆಕ್ಕಣ್ಣ ಶನಿವಾರ ಬೆಳಗಿನಿಂದಲೇ ಟಿ.ವಿಯ ಮುಂದೆ ಪವಡಿಸಿತ್ತು.

‘ಹೋದ ವಾರ ವಿತ್ತ ಸಚಿವಾಲಯದಲ್ಲಿ ಹಲ್ವಾ ಕಾರ್ಯಕ್ರಮ ನಡೆದಾಗಲೇ ಅಂದ್ಕಂಡಿದ್ದೆ, ಈ ಸಲ ನಿರ್ಮಲಕ್ಕ ಖರೇಖರೇ ಸಿಹಿ ಸುದ್ದಿ ಕೊಡ್ತಾಳ ಅಂತ’ ಎಂದು ಅಗದಿ ಹೆಮ್ಮೆಯಿಂದ ಉಲಿಯಿತು.

‘ಹಲ್ವಾ ಕಾರ್ಯಕ್ರಮ ಪ್ರತಿವರ್ಷ ಮಾಡ್ತಾರಲೇ. ಪ್ರತಿವರ್ಷನೂ ಹಲ್ವಾ ಸಿಹಿ ಇರತೈತಿ. ಹಂಗಂತೇಳಿ ಬಜೆಟ್‌ ಸಿಹಿ ಇರತೈತೇನು?’ ನನ್ನ ಪ್ರಶ್ನೆ.

ADVERTISEMENT

‘ಆದ್ರೆ ಈ ವರ್ಷ ಹಲ್ವಾನೂ ಸಿಹಿ, ಬಜೆಟ್ಟೂ ಸಿಹಿ’ ಬೆಕ್ಕಣ್ಣ ಹಲ್ವಾ ತಿಂದಂತೆ ಬಾಯಿ ಚಪ್ಪರಿಸಿತು.

‘ಯಾರಿಗೆ ಸಿಹಿ? ಬಜೆಟ್ಟಿನಲ್ಲಿ ಬಿ ಫಾರ್‌ ಬಿಹಾರ್‌ ಅನ್ನೋ ಹಂಗೆ ಬಿಹಾರಕ್ಕೆ ಸಿಂಹಪಾಲು ಕೊಟ್ಟಾರೆ. ಕರ್ನಾಟಕಕ್ಕೆ ಭಯಂಕರ ಕಡಿಮೆ’ ನಾನು ದೂರಿದೆ.

‘ಬಿಹಾರ ಅಂದ್ರೆ ನಮ್ಮ ಬ್ರದರ್‌! ಹಿಂದುಳಿದ ರಾಜ್ಯಕ್ಕೆ ಸ್ವಲ್ಪ ವಿಶೇಷ ಗಮನ ಕೊಟ್ಟರೇನು ತಪ್ಪು?’ ಬೆಕ್ಕಣ್ಣ ಸಮರ್ಥಿಸಿತು.

‘ಚುನಾವಣೆ ಮುಂದೈತಿ, ಅದಕ್ಕೇ ಈ ಎಲ್ಲಾ ಗಿಮಿಕ್. ಒಟ್ಟಾರೆ ನೋಡಿದರೆ ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ ಇಂಥವಕ್ಕೆ ಹಂಚಿಕೆ ಕಡಿಮೆಯಾಗೈತಿ’ ಎಂದೆ.

‘ಅದೆಲ್ಲ ಬಿಡು... ನಿರ್ಮಲಕ್ಕ ಮಧ್ಯಮ ವರ್ಗಕ್ಕೆ ಬಂಪರ್‌ ಬಹುಮಾನ ಕೊಟ್ಟಾಳೆ! 12 ಲಕ್ಷದವರೆಗೆ ಆದಾಯವಿದ್ದೋರಿಗೆ ತೆರಿಗೇನೆ ಇಲ್ಲ. ಮಧ್ಯಮ ವರ್ಗದವರ ಕೈಯಲ್ಲಿ ಝಣಝಣ ಕಾಂಚಾಣ. ಮೋದಿಮಾಮಾನ ಹೃದಯದೊಳಗೆ ಮಧ್ಯಮ ವರ್ಗದವರೇ ಇದ್ದಾರಂತ ಶಾ ಅಂಕಲ್ಲು ಹೇಳ್ಯಾರೆ’ ಬೆಕ್ಕಣ್ಣ ಉದ್ಗರಿಸಿತು.

‘ಹೌದೌದು. ಹೃದಯದೊಳು ಮಧ್ಯಮ ವರ್ಗ, ತಲೆಯೊಳಗೆ ಸಿರಿವಂತ ಉದ್ಯಮಿಗಳು, ಕಾರ್ಪೊರೇಟ್‌ ವಲಯ’ ಎಂದು ನಾನು ವಾದಿಸಿದೆ.

‘ಡಿವಿಜಿಯವರು ಹೇಳಿದಂಗೆ, ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು. ತೆರಿಗೆ ಸ್ಲ್ಯಾಬ್‌ ಕೂಡ ಕಡಿಮೆ ಮಾಡ್ಯಾರೆ. ಇನ್ನಾ ಏನು ಬೇಕು ಮಧ್ಯಮ ವರ್ಗದವರಿಗೆ? ಆದರೆ ನೀ ತೆರಿಗೇಲಿ ಉಳಿಸಿದ ರೊಕ್ಕ ನನಗೇ ಕೊಡಬೇಕು ನೋಡಾ’ ಎಂದು ಬೆಕ್ಕಣ್ಣ ಕರಾರು ಹಾಕಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.