
‘ಅಬ್ಬಾ... ಅಂತೂ ಇಂತೂ ಬ್ರಿಟಿಷ್ ಆಡಳಿತ ಪದ್ಧತಿಯಿಂದ ನಮಗೆ ಈಗ ಮುಕ್ತಿ ಸಿಕ್ತು ನೋಡವಾ’ ಪೇಪರು ಓದುತ್ತಿದ್ದ ಬೆಕ್ಕಣ್ಣ ಖುಷಿಯಿಂದ ಒದರಿತು.
‘1947ರ ಆಗಸ್ಟಿನಲ್ಲೇ ನಮಗೆ ಮುಕ್ತಿ ಸಿಕ್ಕೈತಲ್ಲ... ಈಗೇನು ಹೊಸದಾಗಿ ಸಿಕ್ತು?’ ಅಚ್ಚರಿಯಿಂದ ಕೇಳಿದೆ.
‘ನಿಮ್ಮಂಥೋರಿಗೆ ಬುದ್ಧಿನೇ ಇಲ್ಲ! ಆವಾಗ ಸ್ವಾತಂತ್ರ್ಯ ಸಿಕ್ಕಿದ್ದರೂ, ಪ್ರಧಾನಿ ಕಾರ್ಯಾಲಯ, ಗೃಹ ಕಾರ್ಯಾಲಯ ಎಲ್ಲಿದ್ದವು? ಅದೇನೋ ಸೌತ್ ಬ್ಲಾಕ್ ಅಂತಾರಲ್ಲ ಅಲ್ಲಿದ್ದವು. ಈಗ ನಮ್ ಮೋದಿಮಾಮಾರು ಒಂದೊಂದೇ ಬ್ಯಾರೆಕಡಿಗಿ ಬದಲಿಸಲಾಕೆ ಹತ್ಯಾರ’ ಎಂದು ಮೀಸೆ ತಿರುವಿತು.
‘ಅದಕ್ಕೇನಾ ನಿಮ್ಮ ಕಂಗನಾಕ್ಕ ಹೇಳಿದ್ದು... ನಮಗೆ ಸ್ವಾತಂತ್ರ್ಯ ಬಂದಿದ್ದು 1947ರಲ್ಲಿ ಅಲ್ಲ, 2014ರಲ್ಲಿ ಅಂತ’ ಎಂದೆ.
‘ಆಕಿ ಖರೇನೆ ಹೇಳ್ಯಾಳ! ಬ್ರಿಟಿಷ್ ಆಡಳಿತಶಾಹಿ ಪಳೆಯುಳಿಕೆಯಾಗಿತ್ತು ಸೌತ್ ಬ್ಲಾಕಿನ ಪ್ರಧಾನಿ ಕಾರ್ಯಾಲಯ. ಈಗ ಬ್ಯಾರೆ ಕಡೆ ಹೊಸಾ ಕಾಂಪ್ಲೆಕ್ಸ್ ಮಾಡಿ, ‘ಸೇವಾ ತೀರ್ಥ’ ಅಂತ ಹೆಸರಿಟ್ಟಾರೆ.’
‘ಕರ್ಮಯೋಗಿ ಅಂತ ಇಡಬೇಕಿತ್ತು’ ಎಂದು ನಾನು ಕುಟುಕಿದೆ.
‘ನಮ್ ಮೋದಿಮಾಮಾರೇ ಸ್ವತಃ ಕರ್ಮಯೋಗಿ! ಜನಸೇವೆಯೇ ಭಗವಂತನ ಪ್ರಸಾದ ಅಂತ ಕೆಲಸ ಮಾಡತಾರೆ... ಅದಕ್ಕೇ ಸೇವಾ ತೀರ್ಥ ಅಂತ ಹೆಸರಿಟ್ಟಾರೆ.’ ಬೆಕ್ಕಣ್ಣ ಗರ್ವದಿಂದ ಮೀಸೆ ತಿರುವಿತು.
‘ಇನ್ನು ಜನರ ತೀರ್ಥಯಾತ್ರೆಗಳ ಪಟ್ಟಿಗೆ ಅದೂ ಸೇರಬಹುದೇನೋ’ ಎಂದೆ.
‘ತಪ್ಪೇನೈತಿ ಅದ್ರಾಗೆ? ನಮ್ ರಾಜ್ಯದಾಗೂ ಸಿಎಂ ನಿವಾಸದ ಹೆಸರು ಬದಲಿ ಮಾಡಬಕು’ ಎಂದು ಮುಗುಮ್ಮಾಗಿ ಹೇಳಿತು.
‘ಕಾವೇರಿಯಲ್ಲಿದ್ದುಕೊಂಡೇ ಐದು ವರ್ಷ ಸಿಎಂ ಆಗಿದ್ದು ಸಿದ್ದು ಅಂಕಲ್ ಒಬ್ಬರೇ ಅಂತೆ. ಈಗ ಎರಡನೇ
ಸಲ ಸಿಎಂ ಆದಾಗಿನಿಂದ ಅವರ ಕುರ್ಚಿ ಅಲುಗಾಡತೈತಿ.
ನೀ ಹೇಳಿದಂಗೆ ಹೆಸರು ಬದಲಿ ಮಾಡೂದು ಒಳ್ಳೇದು’ ಎಂದೆ.
‘ಕುರ್ಚಿ ಬಲಕ್ಕೆ ನಾಮ ಬಲವೂ ಬೇಕು ತಿಳಕೋ’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.