ADVERTISEMENT

ಚುರುಮುರಿ| ಸೇರು ಒದ್ದ ಸೊಸೆ

ಮಣ್ಣೆ ರಾಜು
Published 12 ಮೇ 2020, 19:45 IST
Last Updated 12 ಮೇ 2020, 19:45 IST
.
.   

‘ಅಹಂಕಾರಿ ಅತ್ತೆಗೆ ದುರಹಂಕಾರಿ ಸೊಸೆ ಒದ್ದು ಬುದ್ಧಿ ಕಲಿಸುವುದು ನಮ್ಮ ಧಾರಾವಾಹಿಯ ಒನ್‍ಲೈನ್ ಸ್ಟೋರಿ. ಧಾರಾವಾಹಿಯ ಟೈಟಲ್ ‘ಸೇರು ಒದ್ದ ಸೊಸೆ’, ಟ್ಯಾಗ್‌ಲೈನ್ ‘ಮೂಲೆಗೆ ಬಿದ್ದ ಅತ್ತೆ’ ಅಂತ. ಸೊಸೆ ಸ್ಯಾನಿಟೈಸರ್‌ನಲ್ಲಿ ಕೈಕಾಲು ತೊಳೆದುಕೊಂಡು, ಸೇರು ಒದ್ದು ಅತ್ತೆ ಮನೆ ಪ್ರವೇಶಿಸುವುದರೊಂದಿಗೆ ಧಾರಾವಾಹಿ ಆರಂಭವಾಗುತ್ತದೆ...’ ಪತ್ರಕರ್ತರಿಗೆ ವಿವರ ನೀಡಿದ ಧಾರಾವಾಹಿ ನಿರ್ದೇಶಕ ಶಂಕ್ರಿಯವರು, ‘ಲಾಕ್‍ಡೌನ್ ನಡುವೆ ಶೂಟಿಂಗ್ ನಡೆಸಲು ಸರ್ಕಾರ ಅನುಮತಿ ನೀಡಿದೆ’ ಎಂದರು.

‘ಚಿತ್ರೀಕರಣದಲ್ಲಿ ಕೊರೊನಾ ತಡೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತೀರಾ?’ ಪತ್ರಕರ್ತರ ಪ್ರಶ್ನೆ.

‘ಕಡ್ಡಾಯವಾಗಿ ಅನುಸರಿಸುತ್ತೇವೆ. ಧಾರಾವಾಹಿಯ ಎಲ್ಲ ಪಾತ್ರಧಾರಿಗಳೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ನಟಿಸುತ್ತಾರೆ. ಯಾಕೆಂದರೆ, ಧಾರಾವಾಹಿ ಮುಗಿದರೂ ಕೊರೊನಾ ಕಾಟ ಮುಗಿಯುವಂತೆ ಕಾಣುತ್ತಿಲ್ಲ ಹೆಹ್ಹೆಹ್ಹೆ...’

ADVERTISEMENT

‘ಪಾತ್ರಧಾರಿಗಳು ಮಾಸ್ಕ್ ಹಾಕಿಕೊಂಡರೆ ಲಿಪ್‌ಸ್ಟಿಕ್, ಮೇಕಪ್ ಖರ್ಚು ಉಳಿಯುತ್ತೆ ಅಲ್ವೇ ಸಾರ್?!’

‘ಹೌದು, ಅಷ್ಟೇ ಅಲ್ಲ, ಧಾರಾವಾಹಿಯಲ್ಲಿ ಅತ್ತೆ-ಸೊಸೆ, ಅತ್ತಿಗೆ-ನಾದಿನಿ ಕಪಾಳಕ್ಕೆ ಹೊಡೆಯಲು, ಜುಟ್ಟು ಹಿಡಿದು ಎಳೆದಾಡಲು ಅವಕಾಶ ನೀಡುವುದಿಲ್ಲ. ಅವರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹೊಡೆದಾಟಕ್ಕೆಂದು ಒಂದು ಮೀಟರ್ ಉದ್ದದ ಕೋಲು, ಪೊರಕೆ ಬಳಸುತ್ತೇವೆ’ ಅಂದರು ಶಂಕ್ರಿ.

‘ಸಾರ್, ನಿಮ್ಮ ಧಾರಾವಾಹಿಗಳು ಮಹಿಳಾ ಪ್ರಧಾನವಾಗೇ ಇರುತ್ತವಲ್ಲ, ಪುರುಷರ ಕಡೆಗಣನೆ ಏಕೆ?’

‘ಪುರುಷರು ಟಿ.ವಿ ಸೀರಿಯಲ್ ದ್ವೇಷಿಗಳು. ನಮಗೆ ಪುರುಷರ ಬಗ್ಗೆ ಅಪಾರವಾದ ಸಿಟ್ಟಿದೆ. ಹಾಗಾಗಿ, ಅಸಹಾಯಕ ಗಂಡ, ನಾಲಾಯಕ್ ಮಾವ, ಬೇಜವಾಬ್ದಾರಿ ಮೈದುನ ಅಂತಹ ಪಾತ್ರಗಳನ್ನೇ ಸೃಷ್ಟಿ ಮಾಡುತ್ತೇವೆ. ಗಂಡಸರು ಧಾರಾವಾಹಿಗಳನ್ನು ನೋಡಲು ಶುರುಮಾಡಿದರೆ ಅವರ ಪಾತ್ರಗಳಿಗೂ ಮಾನ್ಯತೆ ಕೊಡುತ್ತೇವೆ...’ ಕಡ್ಡಿ ಮುರಿದಂತೆ ಹೇಳಿದರು ಡೈರೆಕ್ಟರ್ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.