ADVERTISEMENT

ಚುರುಮುರಿ: ಅಮೃತಕಾಲ ಬರತೈತಿ!

ಸುಮಂಗಲಾ
Published 15 ಮೇ 2022, 19:31 IST
Last Updated 15 ಮೇ 2022, 19:31 IST
ಚುರುಮುರಿ
ಚುರುಮುರಿ   

ಬೆಕ್ಕಣ್ಣ, ವಿರಾಟ್ ಕೊಹ್ಲಿಯ ಕ್ರಿಕೆಟ್ ವಿಡಿಯೊವನ್ನೇ ಮತ್ತೆ ಮತ್ತೆ ನೋಡುತ್ತಿತ್ತು.

‘ಏನಲೇ, ಕೊಹ್ಲಿ ಬ್ಯಾಟಿಂಗ್ ಸ್ಟಡಿ ಮಾಡಾಕ ಹತ್ತೀಯೇನ್’ ಅಳುಕುತ್ತಲೇ ಕೇಳಿದೆ. ಯಾರಿಗೆ ಗೊತ್ತು... ‘ಏನಾದರೊಂದು ಮಾಡುತಿರು ತಿಮ್ಮ’ ಮನೋಭಾವದ ಬೆಕ್ಕಣ್ಣ ‘ಕ್ರಿಕೆಟ್ ಕಲಿತೀನಿ, ದ್ರಾವಿಡಣ್ಣನ ಕ್ಲಬ್ಬಿಗೆ ಸೇರಿಸು’ ಎಂದರೂ ಎನ್ನಬಹುದು.

‘ಮೊನ್ನೆ ವಿರಾಟಣ್ಣ ಔಟಾದೇಟಿಗೆ ಆಕಾಶದ ಕಡಿಗಿ ನೋಡಿಕೋತ ಏನೋ ಮಾತಾಡಿದನಂತೆ. ಏನು ಅಂದಿರಬೌದು ಅಂತ ಕಂಡುಹಿಡಿಲಾಕ ಪ್ರಯತ್ನ ಮಾಡಾಕಹತ್ತೀನಿ. ಪೆಟ್ರೋಲು, ಡೀಸೆಲು, ಗ್ಯಾಸು ಎಲ್ಲಾದರ ಬೆಲೆ ಆಕಾಶ ಮುಟ್ಟೈತಿ... ನನ್ನ ರನ್ ರೇಟ್ ಮಾತ್ರ ಪಾತಾಳ ಕಂಡೈತಿ. ನನಗ್ಯಾಕ ಹೀಂಗ ಮಾಡಕೆಹತ್ತೀ ಶಿವನೆ ಅಂತ ಕೇಳಿರಬಕು’ ಎಂದಿತು.

ADVERTISEMENT

‘ಬರೋಬ್ಬರಿ ಊಹೆ ಮಾಡೀಯೇಳು. ಹಣದುಬ್ಬರ ಬಡವರಿಗಿಂತ ಶ್ರೀಮಂತರಿಗೇ ಹೆಚ್ಚು ತ್ರಾಸು ಕೊಡಾಕೆ ಹತ್ತೈತಿ ಅಂತ ನಿಮ್ಮ ನಿರ್ಮಲಕ್ಕ ಹೇಳ್ಯಾಳ. ಮತ್ತ ವಿರಾಟಣ್ಣನೂ ಶ್ರೀಮಂತರೊಳಗ ಒಬ್ಬಾಂವ. ಅತ್ತಾಗೆ ಹಣದುಬ್ಬರ, ಇತ್ತಾಗೆ ರನ್ ಇಳಿತ ಎರಡೂ ಸೇರಿ ಪಾಪ ಅವಂಗ ಹುಚ್ ಹಿಡಿದ್ಹಂಗ ಆಗಿರಬೌದು’ ಎಂದು ಲೊಚ್‌ಗುಟ್ಟಿದೆ.

‘ಈ ಹಣದುಬ್ಬರ, ಬೆಲೆಯೇರಿಕೆ, ನಿರುದ್ಯೋಗ ಯಾವುದೂ ಸಮಸ್ಯೆನೇ ಅಲ್ಲ. ಮುಂದಿನ 25 ವರ್ಷ ಕಾಲ ನಮ್ಮ ದೇಶಕ್ಕೆ ಅಮೃತಕಾಲ ಅಂತ ನಿರ್ಮಲಕ್ಕ ಹೇಳ್ಯಾರೆ. ಅಚ್ಛೇ ದಿನ್ ನಂತರ ಅಮೃತಕಾಲ ಬರತೈತಿ. ತಿಳೀತಿಲ್ಲೋ’ ಬೆಕ್ಕಣ್ಣ ಗುರುಗುಟ್ಟಿತು.

‘ಮುಂದಿನ ಮಾತು ಬಿಡಲೇ, ಈಗಿಂದು ಹೇಳು. ಅದ್ಸರಿ, ನಿರ್ಮಲಕ್ಕ ಉಡುಪಿ ಮಠ, ಕೊಲ್ಲೂರು ದೇವಸ್ಥಾನಕ್ಕ ಭೇಟಿ ಮಾಡಿದ್ರಂತ. ಈ ಸಲನೂ ಕರುನಾಡಿನ ರಾಜ್ಯಸಭೆಯಿಂದಲೇ ಆಯ್ಕೆಯಾಗಲಂತ ಬೇಡಿಕೊಂಡರೇನು?’ ಅಂದೆ.

‘ನದಿಮೂಲ, ಋಷಿಮೂಲ ಹುಡುಕ ಬಾರದು ಅಂತಾರಲ್ಲ, ಹಂಗ ರಾಜಕಾರಣಿ ದೇವಸ್ಥಾನ ಭೇಟಿ ಮೂಲ ಕೆದಕಬಾರದು, ತಿಳೀತಿಲ್ಲೋ’ ಎಂದು ಹೊಸ ಗಾದೆ ಹೊಸೆದು ಹೊರಗೋಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.