ADVERTISEMENT

ಚುರುಮುರಿ | ರಿಸಲ್ಟ್ ರಗಳೆ

ಮಣ್ಣೆ ರಾಜು
Published 21 ಮೇ 2024, 23:30 IST
Last Updated 21 ಮೇ 2024, 23:30 IST
   

‘ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಮಕ್ಕಳಿಗೆ ಕೃಪಾಂಕ ನೀಡಿದ್ದಕ್ಕೆ ಮುಖ್ಯಮಂತ್ರಿ ಸಿಟ್ಟಾಗಿದ್ದಾ
ರಂತೆ ಕಣ್ರೀ’ ಅಂದಳು ಸುಮಿ.

‘ಹೌದು, ಫಲಾನುಭವಿಗಳಿಗೆ ಸಾಲದಲ್ಲಿ ಸಬ್ಸಿಡಿ ನೀಡುವಂತೆ ಇಲಾಖೆಯು ಮಕ್ಕಳಿಗೆ ಕೃಪಾಂಕ ಕರುಣಿಸಿದೆ. ಊಟ, ಬಟ್ಟೆ, ಪುಸ್ತಕದ ಜೊತೆಗೆ ಮಕ್ಕಳಿಗೆ ಉಚಿತವಾಗಿ ಕೃಪಾಂಕ ಕೊಟ್ಟರೂ ಪರೀಕ್ಷಾ ಫಲಿತಾಂಶ ಕುಸಿದಿದೆಯಂತೆ’ ಅಂದ ಶಂಕ್ರಿ.

‘ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ ಮೂಲಕ ವೆಬ್‌ಕಾಸ್ಟಿಂಗ್‌ ಅಳವಡಿಸಿದ್ದು ಫಲಿತಾಂಶ ಕುಸಿಯಲು ಕಾರಣವಂತೆ’.

ADVERTISEMENT

‘ಸಿ.ಸಿ. ಕ್ಯಾಮೆರಾ ಕೆಂಗಣ್ಣಿಗೆ ಮಕ್ಕಳು ಹೆದರಿರಬಹುದು. ಸಾಲದ್ದಕ್ಕೆ ಪರೀಕ್ಷಾ ಕೇಂದ್ರದ ಸುತ್ತ ಪೊಲೀಸ್ ಕಾವಲು, ಆಗಾಗ ಸ್ಕ್ವಾಡ್‍ಗಳು ಬಂದು ಹೆದರಿಸಿದ್ರೆ ಮಕ್ಕಳು ನಿರ್ಭೀತಿಯಿಂದ ಪರೀಕ್ಷೆ ಬರೆಯಲು ಸಾಧ್ಯವೇ?’

‘ಹೀಗೆ ಮಾಡದಿದ್ದರೆ ಪರೀಕ್ಷೆಯಲ್ಲಿ ಅಕ್ರಮ ನಡೆಯುವುದಂತೆ’.

‘ಎಲ್ಲಾ ಶಾಲೆಗಳ ಕ್ಲಾಸ್ ರೂಮ್‌ಗಳಿಗೆ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಿ ಪಾಠಪ್ರವಚನದ ಲೋಪಗಳನ್ನು ತರಗತಿ ಹಂತದಲ್ಲೇ ಸರಿಪಡಿಸಿದ್ದರೆ ಪರೀಕ್ಷೆಗಳನ್ನು ಸರಳವಾಗಿ ಮಾಡಬಹುದಿತ್ತೇನೊ’.

‘ಹೌದು, ತರಗತಿಯಲ್ಲಿ ಯಾವ ಮಕ್ಕಳು ಆಸಕ್ತಿಯಿಂದ ಪಾಠ ಕೇಳುತ್ತಿದ್ದಾರೆ, ಇನ್ಯಾರು ಆಕಳಿಸಿ, ತೂಕಡಿಸುತ್ತಿದ್ದಾರೆ ಎಂಬುದು ಅಧಿಕಾರಿಗಳ ಗಮನಕ್ಕೆ ಬರುತ್ತದೆ. ನಿರಾಸಕ್ತ ಮಕ್ಕಳಿಗೆ ಸ್ಪೆಷಲ್ ಕ್ಲಾಸ್ ತಗೊಂಡು ಅವರ ಜ್ಞಾನ ವೃದ್ಧಿಸಬಹುದು’.

‘ಬಿಸಿಯೂಟ ಉಂಡ ಶಿಕ್ಷಕರಿಗೇ ತೂಕಡಿಕೆ ಬರುತ್ತದೆ, ಮಕ್ಕಳು ತೂಕಡಿಸದೆ ಇರ್ತಾರಾ?’

‘ಹಾಗಂತ, ಊಟದ ನಂತರ ಮಕ್ಕಳು ನಿದ್ರೆ ಮಾಡಲೆಂದು ಒಂದು ಪಿರಿಯಡ್ ಮೀಸಲಿಡ
ಲಾಗುತ್ತಾ?’

‘ಆಗಲ್ಲ, ಶೈಕ್ಷಣಿಕ ಸಮಸ್ಯೆ ಜಾಸ್ತಿಯಾಗ್ತಿದೆ. ಅನೇಕ ಶಾಲೆಗಳಲ್ಲಿ ಒಬ್ಬರೂ ಪಾಸಾಗದೆ ಬಿಗ್ ಜೀರೊ ರಿಸಲ್ಟ್ ಬಂದಿದೆಯಂತೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು’.

‘ನಿಜ, ಆಯಾ ಶಾಲೆಗಳಿಗೇ ಪರೀಕ್ಷೆ ನಡೆಸುವ ‘ಕಾಪಿರೈಟ್ಸ್’ ಕೊಟ್ಟರೆ ಎಲ್ಲ ಮಕ್ಕಳೂ ಪಾಸ್ ಆಗ್ತಾರೆ, ಇಲಾಖೆಯೂ ಪಾಸ್ ಆಗ್ತದೆ’ ಎಂದಳು ಸುಮಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.