ADVERTISEMENT

ಚುರುಮುರಿ: ಸಿಎಂ ಟಾಸ್ಕ್

ಮಣ್ಣೆ ರಾಜು
Published 2 ಡಿಸೆಂಬರ್ 2025, 23:30 IST
Last Updated 2 ಡಿಸೆಂಬರ್ 2025, 23:30 IST
   

‘ಇದು ಬಿಗ್‌ ಬಾಸ್... ಮನೆಯ ಸದಸ್ಯರಿಗೆ ಬಿಗ್‌ ಬಾಸ್ ಚಟುವಟಿಕೆಯೊಂದನ್ನು ನೀಡುತ್ತಿದ್ದಾರೆ, ಅದುವೇ ಸಿಎಂ ಟಾಸ್ಕ್...’ ಎಂದು ಬಿಗ್ ಬಾಸ್ ಪ್ರಕಟಿಸಿದರು.

ಮನೆಯ ಸದಸ್ಯರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

‘ಟಾಸ್ಕ್‌ನ ನಿಯಮಗಳು ಈ ರೀತಿ ಇವೆ... ಸ್ಪರ್ಧಿಗಳು ಗೆರೆ ಬಳಿ ನಿಲ್ಲಬೇಕು, ಬಜರ್ ಆದನಂತರ ಮುನ್ನುಗ್ಗಿ ಹೋಗಿ ಅಲ್ಲಿರುವ ಸಿಎಂ ಕುರ್ಚಿಯ ಕಾಲು ಹಿಡಿಯಬೇಕು. ಹೆಚ್ಚು ಸಮಯ ಯಾರು ಕುರ್ಚಿಯ ಕಾಲು ಹಿಡಿದಿರುತ್ತಾರೋ ಅವರು ಈ ಟಾಸ್ಕ್‌ನ ವಿಜೇತರಾಗಿ ಸಿಎಂ ಕುರ್ಚಿ ಮೇಲೆ ಕುಳಿತುಕೊಳ್ಳುವ ಅವಕಾಶ ಪಡೆಯುತ್ತಾರೆ’ ಎಂದು ಬಿಗ್‌ ಬಾಸ್ ಘೋಷಿಸಿದರು.

ADVERTISEMENT

‘ಓಕೆ ಬಿಗ್ ಬಾಸ್’ ಸದಸ್ಯರು ಖುಷಿಯಾದರು.

‘ಎದುರಾಳಿ ಸ್ಪರ್ಧಿಗಳು ಸಿಎಂ ಕುರ್ಚಿಯ ಕಾಲು ಹಿಡಿಯದಂತೆ ಅವರ ಕಾಲು ಎಳೆಯುವುದು ನಿಮಗಿರುವ ಸವಾಲು. ಕಾಲು ಮಾತ್ರವೇ ಎಳೆಯಬೇಕು, ಕೈ–ಮೈ, ಜುಟ್ಟು, ಬಟ್ಟೆ ಹಿಡಿದು ಎಳೆದಾಡುವಂತಿಲ್ಲ. ನಿಯಮಗಳನ್ನು ಉಲ್ಲಂಘಿಸಿದವರು ಮನೆಯಿಂದ ಹೊರಹೋಗಲು ನೇರವಾಗಿ ನಾಮಿನೇಟ್ ಆಗುತ್ತಾರೆ, ಎಚ್ಚರಿಕೆ’ ಎಂದರು ಬಿಗ್‌ ಬಾಸ್.

‘ಓಕೆ ಬಿಗ್ ಬಾಸ್’.

‘ಸಿಎಂ ಕುರ್ಚಿ ಕಾಲು ಹಿಡಿಯಲು ಯಾರಿಗೂ ಅವಕಾಶ ಮಾಡಿಕೊಡದಂತೆ ನೀವೆಲ್ಲಾ ಆಡಬೇಕು’.

‘ಕೊಡೋದಿಲ್ಲಾ ಬಿಗ್ ಬಾಸ್, ಕಾಲೆಳೆಯುವ ಕಲೆಯಲ್ಲಿ ನಾವು ಪರಿಣತರು!’

‘ನಮಗೂ ಗೊತ್ತಿದೆ!’ ಎಂದು ಬಿಗ್ ಬಾಸ್ ನಕ್ಕರು.

‘ಕುರ್ಚಿ ಕಾಲನ್ನು ಯಾರೂ ಹಿಡಿಯದಿದ್ದರೆ ಯಾರನ್ನು ಸಿಎಂ ಟಾಸ್ಕ್ ವಿನ್ನರ್ ಎಂದು ಘೋಷಿಸ್ತೀರಿ ಬಿಗ್ ಬಾಸ್?’

‘ಸಿಎಂ ಟಾಸ್ಕ್ ಮನರಂಜನೆಗಷ್ಟೇ, ಸೂಕ್ತ ಕಾಲದಲ್ಲಿ ಸೂಕ್ತವಾದವರನ್ನು ಸಿಎಂ ಟಾಸ್ಕ್ ವಿಜೇತರೆಂದು ಬಿಗ್ ಬಾಸ್ ಘೋಷಿಸುತ್ತಾರೆ!’

ಸದಸ್ಯರು ಪರಸ್ಪರ ಮುಖ ನೋಡಿಕೊಂಡು, ‘ಓಕೆ ಬಿಗ್ ಬಾಸ್, ನಿಮ್ಮ ತೀರ್ಮಾನ, ಆದೇಶಗಳಿಗೆ ನಾವು ಸದಾ ಬದ್ಧರಾಗಿರುತ್ತೇವೆ...’ ಎಂದು ಒಕ್ಕೊರಲ ಅಭಿಪ್ರಾಯ ಹೇಳಿದರು.

ಬಿಗ್ ಬಾಸ್ ಮತ್ತೊಮ್ಮೆ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.