ADVERTISEMENT

ಚುರುಮುರಿ: ಕೊರೊನಾ ಸ್ಟಾಕ್!

ಬಿ.ಎನ್.ಮಲ್ಲೇಶ್
Published 18 ಮಾರ್ಚ್ 2021, 19:31 IST
Last Updated 18 ಮಾರ್ಚ್ 2021, 19:31 IST
ಚುರುಮುರಿ
ಚುರುಮುರಿ   

‘ರೀ... ಕೊರೊನಾ ಸೆಕೆಂಡ್ ವೇವ್ ಬಂದೇತಂತೆ? ಗೌರ್ಮೆಂಟ್‍ನೋರು ಮತ್ತೇನಾದ್ರು ಲಾಕ್‍ಡೌನು, ಸೀಲ್‍ಡೌನು ಮಾಡ್ತಾರಾ?’

ಹೆಂಡತಿ ಪಮ್ಮಿ ಪ್ರಶ್ನೆಗೆ ಉತ್ತರಿಸಿದ ತೆಪರೇಸಿ, ‘ಸದ್ಯಕ್ಕೆ ಅದೇನೂ ಮಾಡಲ್ಲಂತೆ... ಪೇಪರ್ ನೋಡಿಲ್ವ?’ ಎಂದ.

‘ಆದ್ರು ಅವರ‍್ನ ನಂಬಂಗಿಲ್ಲ ಕಣ್ರಿ, ನಮ್ ಹುಷಾರಲ್ಲಿ ನಾವಿರಬೇಕು. ಮನೆಗೆ ಏನೇನು ಬೇಕು ಎಲ್ಲ ಸ್ವಲ್ಪ ಸ್ಟಾಕ್ ತಂದು ಇಟ್ಕೋಬೇಕು ಅಲ್ವ?’

ADVERTISEMENT

‘ನೀ ಹೇಳೋದೂ ನಿಜ ಅನ್ನು, ಟಿ.ವಿ.ಯೋರು ರಣಕೇಕೆ, ಮರಣಮೃದಂಗ ಅಂತ ಹಾಕೋಕೆ ಶುರು ಮಾಡಿದ್ರೆ ಸರ್ಕಾರದೋರು ಮತ್ತೆ ಉಲ್ಟಾ ಹೊಡೆದ್ರೂ ಹೊಡೀಬಹುದು...’

‘ಅದ್ಕೇ ಹೇಳಿದ್ದು, ಒಂದ್ ತಿಂಗಳಿಗೆ ಏನೇನ್ ಬೇಕು ಹೇಳ್ತಾ ಹೋಗ್ತೀನಿ, ನೀವು ಲಿಸ್ಟ್ ಬರೀತೀರಾ? ಆಮೇಲೆ ದುಡ್ಡು ಕೊಡ್ತೀನಿ, ಪೇಟೆಗೆ ಹೋಗಿ ತಗಂಬನ್ನಿ’ ಎಂದಳು ಪಮ್ಮಿ.

ತಲೆಯಾಡಿಸಿದ ತೆಪರೇಸಿ, ಹೆಂಡತಿ ಹೇಳಿದ್ದನ್ನೆಲ್ಲ ಲಿಸ್ಟ್ ಬರೀತಾ ಹೋದ. ತರಕಾರಿ, ದಿನಸಿ ಸಾಮಾನು, ಹಣ್ಣು ಹಂಪಲು, ಬೇಕರಿ ಐಟಂಗಳು... ಎಲ್ಲ ದೊಡ್ಡ ಪಟ್ಟಿಯೇ ಆಯಿತು.

‘ಅಷ್ಟಕ್ಕೆಲ್ಲ ಎಷ್ಟ್ ಆಗಬಹುದುರೀ?’ ಕೇಳಿದಳು ಪಮ್ಮಿ.

‘ಅಂದಾಜು ಹತ್ತರಿಂದ ಹದಿನೈದು ಸಾವಿರ ಆಗಬಹುದು ಕಣೆ...’ ತಡವರಿಸಿದ ತೆಪರೇಸಿ.

ಪಮ್ಮಿಗೇಕೋ ಅನುಮಾನ. ‘ಎಲ್ಲಿ ಲಿಸ್ಟ್ ಕೊಡಿ ಇಲ್ಲಿ’ ಎಂದು ಲಿಸ್ಟ್ ಕಸಿದುಕೊಂಡು ಕಣ್ಣಾಡಿಸಿ, ‘ಏನ್ರಿ ಇದು ಎಣ್ಣೆ ಎಣ್ಣೆ ಅಂತ ಎರಡು ಕಡೆ ಬರೆದಿದೀರಿ? ನೋಡಿ ಇಲ್ಲಿ’ ಎಂದು ತೋರಿಸಿದಳು.

‘ಅದೂ... ಒಂದು ಅಡುಗೆ ಎಣ್ಣೆ...’

‘ಇನ್ನೊಂದು?’

‘ಅದು ಬೇರೆ... ಬಂದ ಸಂಬಳನೆಲ್ಲ ನೀನೇ ಕಸ್ಕಂತೀಯ, ಮತ್ತೆ ನನ್ನ ಅಬ್ಕಾರಿ ಸ್ಟಾಕಿಗೆ ಏನ್ಮಾಡ್ಲಿ?’

ಪಮ್ಮಿ ದೊಡ್ಡ ಕಣ್ಣು ಬಿಟ್ಟು ಗುರ್ ಎಂದಳು. ತೆಪರೇಸಿ ಪಿಟಿಕ್ಕೆನ್ನಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.