ADVERTISEMENT

ಚುರುಮುರಿ | ಸರ್ಕಾರಿ ಮುಹೂರ್ತ

ಮಣ್ಣೆ ರಾಜು
Published 2 ಜೂನ್ 2020, 20:15 IST
Last Updated 2 ಜೂನ್ 2020, 20:15 IST
   

‘ಸಾರ್, ನಮ್ಮ ಮಗಳ ಮದುವೆ ಇದೆ, ಸರ್ಕಾರಿ ಮುಹೂರ್ತದಲ್ಲೇ ಫಿಕ್ಸ್ ಮಾಡಿದ್ದೀವಿ, ತಪ್ಪದೆ ಬನ್ನಿ ಸಾರ್’ ಎಂದು ಸರ್ಕಾರಿ ಸಾಹೇಬರಿಗೆ ಶಂಕ್ರಿ, ಸುಮಿ ಇನ್ವಿಟೇಷನ್ ಕೊಟ್ಟರು.

‘ಕೊರೊನಾ ಕಂಡೀಷನ್ಸ್ ಕಡ್ಡಾಯವಾಗಿ ಫಾಲೊ ಮಾಡಬೇಕು’ ಅಂದರು ಸಾಹೇಬ್ರು.

‘ಮಾಡ್ತೀವಿ ಸಾರ್, 50 ಜನರನ್ನು ಮಾತ್ರ ಮದುವೆಗೆ ಕರೆದಿದ್ದೀವಿ. ಒಡವೆ-ವಸ್ತ್ರದ ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಖರೀದಿ ಮಾಡಿದ್ದೀವಿ’ ಅಂದ ಶಂಕ್ರಿ.

ADVERTISEMENT

‘ಮದುವೆಗೆ ಸಣ್ಣ ಮಕ್ಕಳಿಗೆ ಪ್ರವೇಶವಿಲ್ಲ’.

‘ಯಾಕೆ ಸಾರ್, ಮಕ್ಕಳು ರೇಷ್ಮೆ ಸೀರೆ ಮೇಲೆ ಗಲೀಜು ಮಾಡ್ತಾವೆ ಅಂತನಾ?’ ಸುಮಿ ಕೇಳಿದಾಗ ಸಾಹೇಬ್ರು ಮುಖ ಕಿವುಚಿಕೊಂಡರು.

‘ಎಳೆಮಕ್ಕಳು, ಅಳೋ ಮಕ್ಕಳಿಗೆ ಪ್ರವೇಶವಿಲ್ಲ ಅಂತ ಇನ್ವಿಟೇಷನ್‍ನಲ್ಲೇ ಪ್ರಿಂಟ್ ಮಾಡಿಸಿದ್ದೀವಿ, ಓದಿ ನೋಡಿ’ ಎಂದ ಶಂಕ್ರಿ.

‘ವಯೋವೃದ್ಧರೂ ಮದುವೆಗೆ ಬರುವಂತಿಲ್ಲ’.

‘ವಯಸ್ಸು ನೋಡಿಕೊಂಡೇ ಇನ್ವಿಟೇಷನ್ ಹಂಚಿದ್ದೀವಿ. ಆದರೆ ಸಾರ್, ವರನ ತಂದೆಗೆ 65 ವರ್ಷ ವಯಸ್ಸಾಗಿದೆ ಅವರೂ ಬರಬಾರದಾ?’

‘ಅವಕಾಶ ಇಲ್ಲ’ ಅಂದ್ರು ಸಾಹೇಬ್ರು.

‘ಮನೆಯಿಂದಲೇ ಆಶೀರ್ವಾದ ಮಾಡಿ ಅಂತ ಬೀಗರಿಗೆ ಕೇಳಿಕೋಳ್ತೀವಿ ಸಾರ್’.

‘ರೇಷ್ಮೆ ಸೀರೆ, ಒಡವೆ ಧರಿಸಬಹುದೇ ಸಾರ್?’ ಸುಮಿ ಕೇಳಿದಳು.

‘ಸೀರೆ ಯಾವ್ದಾದ್ರೂ ಧರಿಸಿ, ಮಾಸ್ಕ್ ಮಾತ್ರ ಕಡ್ಡಾಯ’.

‘ಎಲ್ಲಾ ಕಡೆ ಮಹಿಳೆಯರಿಗೆ ಮೀಸಲಾತಿ ಇದೆ. ಮದುವೆಯಲ್ಲಿ ಮಾಸ್ಕ್ ವಿಚಾರದಲ್ಲಿ ಮಹಿಳೆಯರಿಗೆ ವಿನಾಯಿತಿ ಕೊಡಿ ಸಾರ್’ ಸುಮಿ ಕೇಳಿಕೊಂಡಾಗ ಸಾಹೇಬ್ರು ಗುರ್ ಅಂದ್ರು.

‘ಉಲ್ಲಂಘನೆ ಮಾಡಿದರೆ ಕ್ರಮ ತಗೊಳ್ತೀವಿ’.

‘ಮಾಡೊಲ್ಲ ಸಾರ್, ಮಾಸ್ಕ್ ಹಾಕಿಕೊಂಡೇ ಊದುವಂತೆ ಓಲಗದವರಿಗೂ ಹೇಳಿದ್ದೀವಿ ಸಾರ್’ ಅಂದ ಶಂಕ್ರಿ.

‘ಸಾರ್, ವಧು–ವರರು ಜೀವನಪರ್ಯಂತ ಅಂತರ ಕಾಪಾಡಿಕೊಂಡೇ ಇರಬೇಕಾ?’

ಸಾಹೇಬ್ರು ಇನ್ನೊಮ್ಮೆ ಗುರ್ ಅಂದರು. ಶಂಕ್ರಿ, ಸುಮಿ ಉಸಿರುಬಿಡದೆ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.