ADVERTISEMENT

ಚುರುಮುರಿ | ದನ ಕಾಯೋರ‍್ಯಾರು?

ಎಂ.ಮಂಜುನಾಥ ಬಮ್ಮನಕಟ್ಟಿ
Published 12 ಆಗಸ್ಟ್ 2020, 19:31 IST
Last Updated 12 ಆಗಸ್ಟ್ 2020, 19:31 IST
   

‘ಡಾಕ್ಟರ್, ನಮ್ಗ ಕೊರೊನಾ ಬಂದೈತಿ ಅಂತ್ಹೇಳಿ ಮನಿಯೊಳ್ಗ ಇದ್ದ ಐದು ಜನಾನೂ ಕರಕೊಂಡು ಹೊಂಟೀರಿ. ನಮ್ಮ ಮನಿಯೊಳ್ಗಿನ ದನ-ಕರು ಯಾರ್ ನೋಡ್ಕೋಂತಾರ’.

‘ಅಯ್ಯೋ ಗುರುವೆ, ನಾನು ಮನುಷ್ಯಾರ ಡಾಕ್ಟರ್. ನಾನು ಏನಿದ್ದರೂ ಮನುಷ್ಯಾರ ಬಗ್ಗೆ ಮಾತ್ರ ವಿಚಾರ ಮಾಡೋದು’.

‘ಅಲ್ರೀ ಡಾಕ್ಟರ್, ನಿಮ್ಗ ಸಂಬಂಧ ಇಲ್ಲಾಂದ್ರ ದನದ ಡಾಕ್ಟರ್‍ನ ಕರೀರಿ’.

ADVERTISEMENT

ಡಿಎಚ್‍ಒ ಫೋನ್ ಮಾಡಿದ್ದ ತಡಾ ಪಶುವೈದ್ಯಾಧಿಕಾರಿ ಹಾಜರಾದರು. ವಿಷಯ ಕೇಳಿದ ಅವರು, ‘ಡಿಎಚ್‍ಒರ ನಾನು ದನದ ಡಾಕ್ಟರ್ ಹೌದು, ಆದ್ರ ನನ್ನ ಕೆಲ್ಸ ಅರಾಮ ಇಲ್ದ ದನಕರುಗಳಿಗೆ ಚಿಕಿತ್ಸೆ ಕೊಡೋದು. ಇಲ್ಲಿ ಅಂಥಾ ಸಮಸ್ಯೆ ಇದ್ರ ಹೇಳ್ರಿ ಚಿಕಿತ್ಸೆ ಮಾಡತೇನಿ. ಅದುಬಿಟ್ಟು ಅವನ್ನ ನೋಡಿಕೊಳ್ಳೋದು ನನ್ನ ಕೆಲ್ಸ ಅಲ್ರೀ’ ಅಂದ್ರು.

‘ಗುರಪ್ಪನವರ ಇದಕ್ಕ ಏನ್ ಮಾಡೋದ್ರಿ?’

‘ಗ್ರಾಮ ಪಂಚಾಯಿತಿ ಅವರನ್ನ ಕರಸ್ರೀ’.

ಗುರಪ್ಪನ ಮಾತು ಕೇಳಿ ಡಿಎಚ್‍ಒ ಫೋನ್ ಹೋಗಿದ್ದ ತಡಾ ಪಿಡಿಒ, ಗುರಪ್ಪನ ಮನಿಮುಂದ ಹಾಜರಾದರು. ಅವ್ರಿಗೆ ಎಲ್ಲ ವಿವರಿಸಿದ ಡಿಎಚ್‌ಒ, ‘ಇವ್ರ ಜಾನುವಾರು ಜವಾಬ್ದಾರಿ ನೀವು ತೊಗಬೇಕು ನೋಡ್ರಿ?’ ಅಂದ್ರು.

‘ಇರಲಾರದ ಕೆಲ್ಸ ನಮ್ಗ ಅದಾವು. ಇಂಥಾದ್ರೊಳ್ಗ ಈ ದನಾ ಕಾಯೊ ಕೆಲ್ಸ ಒಂದ್ ಕಡ್ಮಿ ಆಗಿತ್ತು’ ಎಂದು ಗೊಣಗಿಕೊಂಡ ಪಿಡಿಒ ‘ನಮ್ಮ ಕರ್ಮರೀ ಡಿಎಚ್‍ಒರ, ಆಗಲಿ ಬಿಡ್ರಿ, ನಮ್ಮ ಪಂಚಾಯ್ತಿ ಸಿಬ್ಬಂದಿ ಕಳಿಸಿ ಈ ದನಾ ಕಾಯತೇವಿ’ ಅಂದಿದ್ದ ತಡಾ ಗುರಪ್ಪ 108 ವಾಹನ ಹತ್ತಿದಾ. ಡಿಎಚ್‍ಒ ತಮ್ಮ ಗಾಡಿ ಹತ್ತಿದ್ರು. ಪಿಡಿಒ ಓಡಿ ಬಂದವ್ರು ‘ಡಿಎಚ್‍ಒರ ಮಿನಿಷ್ಟರ್ ವಿಡಿಯೊ ಕಾನ್ಫರನ್ಸ್‌ನೊಳ್ಗ ಇಂಥಾ ಸಮಸ್ಯೆ ಬಂದ್ರ ಏನ್ ಮಾಡಬೇಕಂತ ಒಂದಷ್ಟು ಕೇಳ್ರಿ’.

‘ಆಗಲಿ, ಇದರ ಬಗ್ಗೆ ಮೊದಲ ಡಿ.ಸಿ ಅವ್ರ ಕೂಡ ಮಾತಾಡತೇನಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.