ADVERTISEMENT

ಕತ್ತೆಗಳೆಲ್ಲವೆ?

ಲಿಂಗರಾಜು ಡಿ.ಎಸ್
Published 20 ಜುಲೈ 2020, 19:31 IST
Last Updated 20 ಜುಲೈ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಊರಿಂದ ಕಿಷ್ಣಣ್ಣ ಬಂದದೆ’ ಅಂದು ತುರೇಮಣೆ ಬ್ಯಾಗಿಡಕಂಡು ಹೋದರು. ಒಳಗೆ ಅಣ್ಣ ಕುಂತುತ್ತು.‌

‘ಏನಣ್ಣಾ, ಕೊರೊನಾ ಅಂತ ಎಲ್ಲಾ ಬೆಂಗಳೂರಿಂದ ಕಡದೋಯ್ತಾವರೆ, ನೀವು ಇವಾಗ ಬಂದಿದೀರಲ್ಲಾ?’ ಅಂದೆ.

‘ಹೇಳದೇ ಹೋದೋರು ಕೇಳದೇ ವಾಪಾಸ್ ಬತ್ತರೆ ಬುಡ್ಲಾ. ನಾವು ಕೊರೊನಾ ಬಂದ್ರೂ ಪ್ಲೆಜರ್ ಮಾಡಿಕ್ಯಣಕಿಲ್ಲ. ಹಂಗೂ ಸತ್ರೆ ಬೊಂಬುಲೆನ್ಸ್ ಹತ್ತಿಕ್ಯಂಡು ಹೋಯ್ತಾ ಇರದೇಯ’.

ADVERTISEMENT

‘ಕೊರೊನಾ ಗಾವು ಸಿಗೀತಾ ಕೂತದೆ, ಸತ್ರೆ ದಪನ್‍ಗೆ ಕ್ಯೂ ಅದೆ! ಪ್ರವೇಟ್ ಆಸ್ಪತ್ರೆನಗೆ ಬೆಡ್ಡು ಸಿಕ್ಕಕುಲ್ಲ! ಎಲ್ಲೋದೀರಿ?’

‘ಲೋ, ನಿನಗೆ ಗೆನರಲ್ ನಾಲೆಡ್ಜು ಇಲ್ಲವುಲಾ! ಪ್ರವೀಟ್ ಕಾಲೇಜು ಆಪ್ಸತ್ರೆ ಅಂದ್ರೆ ಸರ್ಕಾರಕ್ಕೇ ಗೌರವ ಅದೆ, ನಮಗಿರಕುಲ್ವೆ! ಸ್ಟಾರ್ ಹೋಟಲೆಲ್ಲಾ ಪೀಜಿ ಮಾಡ್ಯವರಂತೆ? ಅಲ್ಲೇ ಪ್ಲೇಯಿಂಗ್ ಗೆಸ್ಟಾಗಿರತೀನಿ!’ ಅಂತು ಕಿಷ್ಣಣ್ಣ.

‘ಅಲ್ಲಿ ವಾಟ್ಸೊಪ್ ಕಸಾಯ ಕುಡಕಂಡು ಚೆನ್ನಾಗಿರ್‍ರಿ!’

‘ಅವೆಲ್ಲಾ ಕ್ಯಾಮೆ ಇಲ್ಲದೋರಿಗೆ! ಹಳೇ ಕಾಲದೇಲಿ ದೊಡ್ಡರೋಗ ಬಂದಾಗ ಬಳೆ ಚೂರು ಬಿಸಿ ಮಾಡಿ ಚುಟಿಕೆ ಹಾಕಿ, ಕತ್ತೆ ಹಾಲಲ್ಲಿ ಗಂಡೌಸದಿ ಮಾಡಿ ಹುಯ್ಯತಿದ್ರು ಕನಯ್ಯಾ’.

‘ಅಣೈ, ಈ ಸಲಹೆ ಸಾಮ್ರಾಟರಿಗೇಳಿದ್ರೆ ‘ತತಕ್ಷಣಕ್ಕೆ ನಾವು ಅದುನ್ನೂ ಮಾಡ್ತೀರಿ’ ಅನ್ನಬೌದು. ಆದರೆ ಕತ್ತೆಲ್ಲವೆ?’ ಅಂತಂದೆ.

‘ನೋಡ್ಲಾ, ಒಬ್ರು ಸಾಸಕರು ಕರ್ನಾಟಕದೇಲಿ ಕತ್ತೆಷ್ಟವೆ ಅಂತ ಅಸೆಂಬ್ಲೀಲಿ ಪ್ರಶ್ನೆ ಕೇಳಿದ್ರು. ಆಗ ಇದಾನಸೌದದಗೆ ಒಬ್ಬ ಬುದುವಂತ ಐಎಎಸ್ ಎಣ್ಣುಮಗ ಸೆಕೆಟ್ರಿ ಆಗಿತ್ತು. ಎಲ್ಲಾ ಗ್ರಾಮ ಪಂಚಾತಿಗಳ ಕತ್ತೆ ಲೆಕ್ಕ ನೋಡಿದ ಆಯಮ್ಮನಿಗೆ ಗೊತ್ತಾಯ್ತು ಇದು ತಳ್ಳಿ ಲೆಕ್ಕ ಅಂತ. ‘ಪೀಯೆ ಇದುಕ್ಕೆ ಇನ್ನೆರಡು ಕತ್ತೆ ಸೇರಿಸಿ ಕೊಡು’ ಅಂತ ಅಮ್ಮ ಅಂದ್ರು. ಪೀಯೆ ಕೇಳಿದ ‘ಎರಡೇ ಯಾಕೆ ಮೇಡಂ’ ಅಂತ. ಮೇಡಂ ‘ಲೇಯ್, ಈ ಬೂಸಿ ಲೆಕ್ಕ ಒಪ್ಪಿಗ್ಯಂತಿರ ನೀನು ನಾನು ಕತ್ತೆಗಳೇ ಅಲ್ವೇ!’ ಅಂದ್ರಂತೆ. ಕತ್ತೆಗಳೇನ್ಲಾ ಬೆಂಗಳೂರಗೆ ಬೇಕಾದೋಟವೆ!’ ಅಂದ ಕಿಷ್ಣಣ್ಣನ ಕತೆಯ ಕ್ಯಾತೆಯಲ್ಲಿ ನಾನು ಗೈರುವಿಲೆಯಾಗಿದ್ದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.